ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಬಹುಮಾನ

4CBP5
Published on

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ 3 ಸರ್ಕಾರಿ ಶಾಲೆ, 1 ವಸತಿ ಶಾಲೆ ಹಾಗೂ 1 ಅನುದಾನಿತ ಶಾಲೆಗೆ ತಲಾ 50 ಸಾವಿರ ರೂ.ನಗದು ಬಹುಮಾನವನ್ನು ವೈಯುಕ್ತಿವಾಗಿ ನೀಡುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಘೋಷಿಸಿದರು.

ಜಿಪಂ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯಶಿಕ್ಷರು, ವಸತಿ ನಿಲಯಗಳ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರ. ನರೇಗಾ ಯೋಜನೆಯಲ್ಲಿ ಅಗತ್ಯ ಸರ್ಕಾರಿ ಶಾಲೆಗೆ ಕಾಂಪೌಂಡ್, ಶೌಚಗೃಹ ಹಾಗೂ ಕೈ ತೋಟಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ರಾಜ್ಯದಲ್ಲಿ ಶೇ.90 ರಷ್ಟು ಉತ್ತಮ ಲಿತಾಂಶ ಪಡೆಯಲು ಶ್ರಮಿಸಬೇಕು, ಉತ್ತಮ ಫಲಿತಾಂಶ ಗಳಿಕೆಯ ಗುರಿ ಸಾಧನೆಗೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು. ಕಲಿಕೆಯಲ್ಲಿನ ದೌರ್ಬಲ್ಯ ಬಗೆಹರಿಸಿ, ಹೆಚ್ಚಿನ ಅಂಕ ಗಳಿಸುವ ಸಾಮರ್ಥ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನಪತ್ರಿಕೆಗಳನ್ನು ಇಲಾಖೆ ಸಿದ್ಧಪಡಿಸಿದೆ. ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ವಿಶೇಷ ತರಗತಿಗಳನ್ನು ನಡೆಸಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಜಿಪಂ ಸಿಇಒ ಬಿ ಫೌಜೀಯಾ ತರುನ್ನುಮ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಶ್, ಕೆಎಸ್‌ಆರ್‌ಟಿಸಿ ಜಿಲ್ಲಾ ಅಧಿಕಾರಿ ಬಸವರಾಜು ಇತರರು ಇದ್ದರು.

ಜಿಲ್ಲಾಡಳಿತ ಅಗತ್ಯ ನೆರವು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ 2 ತಿಂಗಳು ಸಂಜೆ ಉಪಾಹಾರ ವ್ಯವಸ್ಥೆ ಕಲ್ಪಿಸಲು, ಶಾಲೆಗೆ ಹೋಗಿ ಬರಲು ಬೆಳಗ್ಗೆ ಹಾಗೂ ಸಂಜೆ ಸಮರ್ಪಕ ಬಸ್ ಸೌಕರ್ಯ ಒದಗಿಸಲು ಜಿಲ್ಲಾಡಳಿತ ಅಗತ್ಯ ನೆರವು ನೀಡಲು ಸಿದ್ಧವಿದೆ, ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಬ್ಲಾಕ್ ಬೋರ್ಡ್ ಬಳಸುತ್ತಿದ್ದು ಗ್ರೀನ್‌ಬೋರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಶಿಕ್ಷಕರಿಗೆ ಪ್ರತ್ಯೇಕ ಗುರು ಭವನ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net