ಎಸ್ಸೆಸ್ಸೆಲ್ಸಿ ಫಲಿತಾಂಶ : 19 ರಿಂದ 7ನೇ ಸ್ಥಾನಕ್ಕೆ ಜಿಗಿದ ಮೈಸೂರು

sslc 2024
Published on

ಮೈಸೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಈ ಬಾರಿ ಭಾರಿ ಜಿಗಿತವನ್ನು ಕಂಡಿದ್ದು, ಜಿಲ್ಲೆಯು ರಾಜ್ಯಮಟ್ಟದಲ್ಲಿ 19ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ.

ವಿಜಯನಗರದ ಬಿಕೆಎಸ್ ವಿದ್ಯಾಭವನ ಪ್ರೌಢ ಶಾಲೆಯ ಎಸ್. ಜಾಹ್ನವಿ, ವಿಜಯನಗರ ಸದ್ವಿದ್ಯಾ ಪ್ರೌಢ ಶಾಲೆಯ ಡಿ.ಎಸ್. ಧನ್ವಿ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಈ ಬಾರಿ 36796 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 32083 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಜಿಲ್ಲೆ ಶೇ.87.19ರಷ್ಟು ಲಿತಾಂಶ ಪಡೆದುಕೊಂಡಿದೆ. ಈ ಬಾರಿಯೂ ಜಿಲ್ಲೆಯ ಯಾವುದೇ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ. ಜಿಲ್ಲೆಯ 148 ಶಾಲೆಗಳು ಶೇ.100ರಷ್ಟು ಲಿತಾಂಶ ಪಡೆದುಕೊಂಡು ಉತ್ತಮ ಸಾಧನೆ ತೋರಿವೆ. 17847 ಬಾಲಕರು, 18,949 ಬಾಲಕಿಯರು ಸೇರಿದಂತೆ ಒಟ್ಟು 36,796 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 14681 ಬಾಲಕರು, 17,402 ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಸರ್ಕಾರಿ ಶಾಲೆಗಳ 16603 ಮಕ್ಕಳು ಪರೀಕ್ಷೆ ಎದುರಿಸಿ 13892 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.83.67 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳ 7825 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 6692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.85.52 ಫಲಿತಾಂಶ ಲಭಿಸಿದೆ. ಖಾಸಗಿ ಶಾಲೆಗಳ 12368 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11499 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.92.97ರಷ್ಟು ಫಲಿತಾಂಶ ಬಂದಿದೆ.

ನಗರ ಪ್ರದೇಶ ಮೇಲುಗೈ:

ಈ ಬಾರಿ ಗ್ರಾಮೀಣ ಭಾಗದ ಮಕ್ಕಳಿಗಿಂತ ನಗರ ಪ್ರದೇಶ ಮಕ್ಕಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 16036 ವಿದ್ಯಾರ್ಥಗಳ ಪೈಕಿ 14081 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.87.81 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಾಗದ 20760 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 18002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.86.71ರಷ್ಟು ಫಲಿತಾಂಶ ಬಂದಿದೆ.

ತಿ.ನರಸೀಪುರ ಪ್ರಥಮ:

ತಾಲೂಕುವಾರು ಫಲಿತಾಂಶದಲ್ಲಿ ತಿ.ನರಸೀಪುರ ತಾಲೂಕು ಶೇ.93.30ರಷ್ಟು ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದಿದೆ. ಮೈಸೂರು ಗ್ರಾಮಾಂತರ ಶೇ.93.05, ಮೈಸೂರು ದಕ್ಷಿಣ ಶೇ.90.42, ಕೆ.ಆರ್. ನಗರ ತಾಲೂಕು ಶೇ.89.48, ನಂಜನಗೂಡು ಶೇ. 86.74, ಹುಣಸೂರು ಶೇ. 85.24, ಮೈಸೂರು ಉತ್ತರ ಶೇ. 84.68, ಪಿರಿಯಾಪಟ್ಟಣ ಶೇ.81.03 ಫಲಿತಾಂಶ ಪಡೆದುಕೊಂಡಿದ್ದು, ಎಚ್.ಡಿ. ಕೋಟೆ ತಾಲೂಕು ಶೇ.79.09ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ 291 ವಿಶೇಷ ಚೇತನ ಮಕ್ಕಳು ಪರೀಕ್ಷೆ ಬರೆದಿದ್ದು ಇವರಲ್ಲಿ 225 ಮಕ್ಕಳು ಉತ್ತೀರ್ಣರಾಗಿದ್ದು, ಶೇ.77.32 ರಷ್ಟು ಫಲಿತಾಂಶ ಲಭ್ಯವಾಗಿದೆ. ಜಿಲ್ಲೆಯ ಬುಡಕಟ್ಟು ಸಮುದಾಯದ 382 ಮಕ್ಕಳು ಪರೀಕ್ಷೆ ಬರೆದಿದ್ದು, ಇವರಲ್ಲಿ 295 ಮಕ್ಕಳು ಉತ್ತೀರ್ಣರಾಗಿದ್ದಾರೆ.

11 ವಿದ್ಯಾರ್ಥಿಗಳ ಸಾಧನೆ

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ 11 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ವಿಜಯನಗರದ ಸದ್ವಿದ್ಯಾ ಪ್ರೌಢಶಾಲೆಯ ಡಿ.ಎಸ್. ಧನ್ವಿ, ಬಿಕೆಎಸ್‌ವಿಬಿ ಪ್ರೌಢಶಾಲೆಯ ಎಸ್. ಜಾಹ್ನವಿ ಕ್ರಮವಾಗಿ 623 ಅಂಕ ಪಡೆದುಕೊಂಡಿದ್ದಾರೆ. ವಿಜಯ ವಿಠಲ ಪ್ರೌಢಶಾಲೆಯ ಪ್ರಥಮ್ ಭಾರದ್ವಜ್ 622, ವಿಜಯನಗರದ ಸದ್ವಿದ್ಯಾ ಪ್ರೌಢಶಾಲೆಯ ದಿಶಾ ವರ್ಮ 621, ಸದ್ವಿದ್ಯಾ ಪ್ರೌಢಶಾಲೆಯ ಎ. ಕಾವ್ಯಶ್ರೀ 621, ಮರಿಮಲ್ಲಪ್ಪ ಪ್ರೌಢಶಾಲೆಯ ಆರ್. ಭೂಮಿಕಾ 621, ವಿಜಯ ವಿಠಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಿ. ಸುದೀಪ್ತಾ 621, ಬಿಕೆಎಸ್‌ವಿಬಿ ಪ್ರೌಢಶಾಲೆಯ ಎಸ್. ಪ್ರಗತಿ 621 ಅಂಕ ಪಡೆದುಕೊಂದ್ದಾರೆ. ಸಾವಿತ್ರಿ ಕಾನ್ವೆಂಟ್ ಪ್ರೌಢಶಾಲೆಯ ಆ ಅನ್ವಿತಾ ಆರ್. ಭಟ್, ಸದ್ವಿದ್ಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೀಗೌರಿ ಎಸ್. ಕುಮಾರ್, ವಿಜಯ ವಿಠಲ ಆಂಗ್ಲ ಮ್ಯಾಮ ಪ್ರೌಢಶಾಲೆಯ ಎಂ.ಡಿ. ಸುದೀಕ್ಷಾ ತಲಾ 620 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದ ಟಾಪ್-5 ಜಿಲ್ಲೆಗಳಲ್ಲಿ ಸ್ಥಾನ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಡಿಪಿ ಸಭೆಯಲ್ಲಿ ನಮಗೆ ಟಾಸ್ಕ್ ನೀಡಿದ್ದರು. ಆ ಪ್ರಕಾರ ನಾವು ಯೋಜನೆ ರೂಪಿಸಿದೆವು. ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಈ ಬಾರಿ ಉತ್ತಮ ಫಲಿತಾಂಶ ಪಡೆದಿದ್ದೇವೆ. ಈ ಬಾರಿ ಅನುತ್ತೀರ್ಣಗೊಳ್ಳುವ ಸಾಧ್ಯತೆ ಇದ್ದ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ಎಚ್.ಕೆ. ಪಾಂಡು, ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net