

ಮಂಡ್ಯ: ಒಟ್ಟಾರೆ ಫಲಿತಾಂಶದಲ್ಲಿ ಕುಸಿತವಾಗಿರುವುದರ ನಡುವೆ ಸಂತಸದ ವಿಷಯವೆಂದರೆ ಸರ್ಕಾರಿ ಹಾಸ್ಟೆಲ್‌ನಲ್ಲಿ ಓದಿ ಜಿಲ್ಲೆಯ ವಿದ್ಯಾರ್ಥಿ ರಾಜ್ಯದಲ್ಲಿಯೇ ಮೂರನೇ ಟಾಪರ್ ಆಗಿದ್ದಾನೆ.
ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದ ಕೆ.ಸಿ.ನವನೀತ್ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯದಲ್ಲಿ ಮೂರನೇ ಟಾಪರ್ ಸ್ಥಾನ ಪಡೆದಿದ್ದಾನೆ. ನವನೀತ್ ತಂದೆ ಚನ್ನೇಗೌಡ ರೈತರಾಗಿದ್ದು, ತಾಯಿ ವೆಂಕಟಲಕ್ಷ್ಮಮ್ಮ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ಕಷ್ಟದ ನಡುವೆಯೂ ಮಗನಿಗೆ ಬೆಂಬಲವಾಗಿ ನಿಂತಿದ್ದಾರೆ. ಆರನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ತಾಲೂಕಿನ ತುಂಬಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ. ಕನ್ನಡದಲ್ಲಿ 125, ಇಂಗ್ಲೀಷ್ ಮತ್ತು ಹಿಂದಿ, ಗಣಿತದಲ್ಲಿ 100 ಅಂಕ, ಸಮಾಜ ವಿಜ್ಞಾನದಲ್ಲಿ ಹಾಗೂ ವಿಜ್ಞಾನದಲ್ಲಿ ತಲಾ 99 ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ವೈದ್ಯನಾಗುವ ಗುರಿ ಹೊಂದಿರುವ ನವನೀತ್‌ನ ಭವಿಷ್ಯ ಉಜ್ವಲವಾಗಿರಲಿ.