

ರಟ್ಟಿಹಳ್ಳಿ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಅತ್ಯಂತ ಪ್ರಮುಖವಾದ ಘಟ್ಟವಾಗಿವೆ. ಈ ಹಂತದಲ್ಲಿ ಉತ್ತಮ ಸಾಧನೆ ಮಾಡಿದರೆ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಅವರು ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ರಟ್ಟಿಹಳ್ಳಿ ಮತ್ತು ಹಿರೇಕೆರೂರ ತಾಲೂಕಿನ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಒಟ್ಟು 22 ವಿದ್ಯಾರ್ಥಿಗಳಿಗೆ ಕೆಎಂಎಫ್ ಮಾಜಿ ನಿರ್ದೇಶಕ ಹನುಮಂತಗೌಡ ಭರಮಣ್ಣವರ ಅವರು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಐಎಎಸ್ ಮತ್ತು ಕೆಎಸ್ಎಸ್ ಮಾಡುವ ಗುರಿ ಹೊಂದಬೇಕು. ಪ್ರಾಮಾಣಿಕ ಪರಿಶ್ರಮದಿಂದ ನಿರಂತರ ಅಧ್ಯಯನದಿಂದ ಯಶಸ್ಸು ಸಾಸಲು ಸಾಧ್ಯವಾಗುತ್ತದೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಿದರೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಂಎಫ್ ಮಾಜಿ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಮಾತನಾಡಿ, ಸುಮಾರು ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅಧಿಕಾರ ಇರಲಿ ಬಿಡಲಿ ಸಮಾಜ ಸೇವೆ ಮುಖ್ಯವಾಗಿರುತ್ತದೆ. ಸಮಯಪ್ರಜ್ಞೆ ವಿದ್ಯಾರ್ಥಿಗಳಿಗೆ ಮಹತ್ವದ್ದಾಗಿದೆ. ಪಾಲಕರು ಮತ್ತು ಗುರುಗಳು ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶ್ರಮ ವಹಿಸುತ್ತಾರೆ, ಅವರನ್ನು ಸ್ಮರಿಸಬೇಕಾಗುತ್ತದೆ. ಸರಳ ಸಜ್ಜನಿಕೆಗೆ ಹೆಸರಾದ ಮಾಜಿ ಸಚಿವರಾದ ಬಿ.ಜಿ. ಬಣಕಾರ ಮತ್ತು ಸಿ.ಎಂ. ಉದಾಸಿ ಅವರು ನೀಡಿದ ಮಾರ್ಗದರ್ಶನ ಬಹಳ ಉಪಯುಕ್ತವಾಗಿದೆ ಎಂದು ಸ್ಮರಿಸಿದರು.
ವಿದ್ಯಾರ್ಥಿ-ಉದ್ಯೋಗ ಮಿತ್ರ ವಿತರಣೆ: ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ವಿತರಿಸಿದ ಹನುಮಂತಗೌಡ ಭರಮಣ್ಣನವರ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪತ್ರಿಕೆ ಕೈಪಿಡಿಯಾಗಿದೆ. ಪಾಠ, ಉದ್ಯೋಗದ ಮಾಹಿತಿ ಒಳಗೊಂಡಿರುವ ಪತ್ರಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹನುಮಂತಗೌಡ ಭರಮಣ್ಣನವರ ಅವರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು. ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಬಿಇಒ ಶ್ರೀಧರ ಎನ್., ಪ್ರಾಚಾರ್ಯ ಎ.ಜಿ. ರಾಘವೇಂದ್ರ, ಕೆ.ವೈ. ಬಾಜೀರಾಯರ್, ಸಿ.ಸಿ. ನಿಂಬೆಗುಂದಿ, ಸುರೇಶ ಗುಬ್ಬಿ, ಜಗದೀಶ ಮಳಗಿ, ಆರ್.ಜಿ. ನ್ಯಾಮತಿ, ಸುಭಾಷ ಷಣ್ಮನಿ, ಚನ್ನಗೌಡ ಬಸವನಾಳ, ಬಿ.ಸಿ. ತಿಮ್ಮೇನಹಳ್ಳಿ, ಎಚ್.ಬಿ. ಕೆಂಚಳ್ಳಿ, ಸಿ.ಎನ್. ಸೊರಟೂರ, ಶಾಂತಮ್ಮ ಎಚ್, ವಿ.ಎಸ್. ರೂಳಿ, ಎಚ್.ಎಚ್. ಬ್ಯಾಡಗೌಡ್ರು, ಯಲ್ಲಪ್ಪ ಸುರಗೀಹಳ್ಳಿ, ಶೇಷಗಿರಿ ತಾಂದಳೆ ಸಿಬ್ಬಂದಿ ಉಪಸ್ಥಿತರಿದ್ದರು. ಸಿ.ಎಸ್. ಕಮ್ಮಾರ ಮತ್ತು ರಾಜು ಹರವಿಶೆಟ್ಟರ್ ನಿರ್ವಹಿಸಿದರು.