

ಮಂಡ್ಯ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾ.25 ರಿಂದ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾ.1ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಒತ್ತಡಕ್ಕೊಳಗಾಗದೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಜ್ಜುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದರು. ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ ಆಗಬೇಕಿದೆ. ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪರೀಕ್ಷಾ ಅಕ್ರಮಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದರ ಜತೆಗೆ ನಕಲು ಚೀಟಿ ಬಳಕೆಗೆ ಅವಕಾಶ ಮಾಡಿಕೊಡಬಾರದು ಎಂದರು.
ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಸಿದ್ಧವಾಗಿದ್ದು, ಜಿಲ್ಲೆಯಲ್ಲಿ 26 ಕೇಂದ್ರಗಳಲ್ಲಿ ಒಟ್ಟಾರೆ 14,125 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತಿ ಕೇಂದ್ರಕ್ಕೂ ಸಿ.ಸಿ ಕ್ಯಾಮರಾ ಅಳವಡಿಸಿ ಹಾಗೂ ಪರೀಕ್ಷೆ ವೇಳೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಫಲಿತಾಂಶವನ್ನು ಉತ್ತಮಪಡಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಶೇಷ ತರಗತಿ, ಗುಂಪು ಅಧ್ಯಯನ, ಕಡಿಮೆ ಅಂಕ ಪಡೆದಿರುವ ಮಕ್ಕಳಿಗೆ ಪುನರಾವರ್ತನೆ, ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವುದು, ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುವುದು, ಪೂರ್ವಭಾವಿ ಪರೀಕ್ಷೆ ನಡೆಸುವುದು. ಹೀಗೆ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಳೆದ ಬಾರಿ ಕಡಿಮೆ ಫಲಿತಾಂಶ ಬಂದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹೆಚ್ಚು ಗಮನ ಹರಿಸಿ ಪರೀಕ್ಷೆಗೆ ತಯಾರಿ ಮಾಡಬೇಕು. ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿಡಿಪಿಐ ಎಚ್.ಶಿವರಾಮೇಗೌಡ, ಡಿಡಿಪಿಯು ಸಿ.ಚೆಲುವಯ್ಯ ಇತರರಿದ್ದರು.