

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಪೂರ್ವ ಸಿದ್ಧತೆ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ವಾಟ್ಸ್ ಆ್ಯಪ್ನಲ್ಲಿ ಹರಿದಾಡತೊಡಗಿವೆ. ಹೀಗಾಗಿ ಪೂರ್ವಸಿದ್ಧತೆ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಇನ್ನು ನಿಜವಾದ ಪರೀಕ್ಷೆಯ ಪ್ರಶ್ನೆಪತ್ರಿಕೆ ಎಷ್ಟು ಸೇಫ್ ಎಂಬಿತ್ಯಾದಿ ಪ್ರಶ್ನೆಗಳು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಮೂಡಿದೆ.
ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ್ದು ನಿಜವಾದ ಪ್ರಶ್ನೆ ಪತ್ರಿಕೆಯೇ ಅಥವಾ ಅಲ್ಲವೇ ಎಂಬುದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಈ ಬಗ್ಗೆ ದೂರುಗಳು ದಾಖಲಾಗಿವೆ. ಆದರೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇದರ ಬಗ್ಗೆ ಗಮನಹರಿಸಿದ್ದು, ಕ್ರಮಗಳನ್ನು ಜರುಗಿಸಿವೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಂದು ಬೆಳಗ್ಗೆ ಏಳು ಗಂಟೆಗೂ ಮೊದಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಅವರು, ಗೊಂದಲ ಇಲ್ಲದಂತೆ ಪರೀಕ್ಷೆ ನಡೆಸುತ್ತೇವೆ, ಪಾಲಕರು, ವಿದ್ಯಾರ್ಥಿಗಳು ಶಾಂತಚಿತ್ತರಾಗಿ ಪರೀಕ್ಷೆಯತ್ತ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.