

ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ 14 ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ ಸಿಇಎನ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೋಲಾರ ಮತ್ತು ಬಂಗಾರಪೇಟೆ ಭಾಗದ ಮೂರು ಶಾಲೆಗಳಿದ ಸೇರಿದ ವಿದ್ಯಾರ್ಥಿಗಳಾಗಿದ್ದು, ಅವರ ಪಾಲಕರಿಗೆ ಮತ್ತು ಶಿಕ್ಷಕರಿಗೂ ಮಾಹಿತಿ ನೀಡಲಾಗಿದೆ. ಪ್ರಮುಖ ಆರೋಪಿಗಾಗಿ ತನಿಖೆ ಮುಂದುವರಿದಿದೆ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
‘ಹಲೋ ಆಪ್’ನಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಅಪ್ಲೋಡ್ ಆಗಿತ್ತು. ಡೌನ್ಲೋಡ್ ಮಾಡಿಕೊಂಡ ವಿದ್ಯಾರ್ಥಿಗಳು ವಾಟ್ಸ್ಆಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಫೆ.15ರಂದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಅಧಿಕಾರಿಗಳು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಶೇಷ ತಂಡ ಸತತ ಪ್ರಯತ್ನದಿಂದ ಹಲೋ ಆಪ್ ಸುಳಿವಿನ ಮೇರೆಗೆ 14 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿತ್ತು.
ವಿಚಾರಣೆ ನಡೆಸಿದಾಗ ಹಲೋ ಆಪ್ನಲ್ಲಿ ಪ್ರಶ್ನೆಪತ್ರಿಕೆ ಇರುವ ವಿಚಾರ ತಿಳಿದು ಡೌನ್ಲೋಡ್ ಮಾಡಿಕೊಂಡು ಮುಖ್ಯಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆವು. ಪರಸ್ಪರ ಸ್ನೇಹಿತರು ವಾಟ್ಸ್ ಆಪ್ ಗ್ರೂಪ್ನಲ್ಲಿ ಶೇರ್ ಮಾಡಿದ್ದಾಗಿ ಒಪ್ಪಿಸಿಕೊಂಡಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ಹಲೋ ಆಪ್ ಬಗ್ಗೆ ವಿಷಯ ತಿಳಿಸಿದ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ.
ಬಾಲಕರು ಶಾಲೆಯಲ್ಲೇ ಮೊಬೈಲ್ ಬಳಸಿರುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಅವರು ವ್ಯಾಸಂಗ ಮಾಡುತ್ತಿರುವ ಎಲ್ಲ ಶಾಲೆಗಳಿಗೆ ಭೇಟಿ ಕೊಟ್ಟು ಅಲ್ಲಿರಬಹುದಾದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಬೇಕಾಗಿದೆ. ಇಲ್ಲವಾದರೆ, ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸಲು ಶಿಕ್ಷಕರು ಅನುಮತಿ ಕೊಟ್ಟಿದ್ದರಾ ಅಥವಾ ವಿದ್ಯಾರ್ಥಿಗಳೇ ಸುಳ್ಳು ಹೇಳುತ್ತಿದ್ದಾರಾ ಎಂಬ ಮಾಹಿತಿ ಕಲೆ ಹಾಕಬೇಕಾಗಿದೆ. ವಿದ್ಯಾರ್ಥಿಗಳ ಬಳಿ ವಶಕ್ಕೆ ಪಡೆದಿರುವ ಮೊಬೈಲ್ ವಶಕ್ಕೆ ಪಡೆದು ಸಿಐಡಿಯ ಸೈಬರ್ ಲಾಬ್ಗೆ ರವಾನಿಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಮಂಡಳಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಬಗ್ಗೆ ಸಣ್ಣ ಸುಳಿವು ಸಿಕ್ಕರೂ ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಬೇಕು. ಜತೆಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಎಲ್ಲ ರೀತಿಯಲ್ಲೂ ಸಹಕಾರ ಕೊಡುವುದಾಗಿ ತಿಳಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಸುಳಿವು ಕೊಟ್ಟ ಬಿಇಒ
ಬಂಗಾರಪೇಟೆ ಸುತ್ತಮುತ್ತ ವಿದ್ಯಾರ್ಥಿಗಳ ಮೊಬೈಲ್ಗಳಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಗಿರುವ ವಿಚಾರ ಮೊದಲು ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿದಿದೆ. ಅವರು ಮಲ್ಲೇಶ್ವರದ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಮಾಹಿತಿ ನೀಡಿದ್ದು, ಬಳಿಕ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ರಾಕೇಶ್ 8105 ಎಂಬ ಐಡಿ
ಹಲೋ ಆಪ್ ಅಭಿವೃದ್ಧಿಪಡಿಸಿದವರನ್ನು ಸಂರ್ಪಸಲಾಗಿದೆ. ಆಪ್ ಮಾಡಿದ ಉದ್ದೇಶದ ಬಗ್ಗೆ ಪ್ರಶ್ನಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಎಲ್ಲೆಡೆ ಸುದ್ದಿಯಾದ ಮೇಲೆ ಡಿಲೀಟ್ ಮಾಡಲಾಗಿದೆ. ಹಾಗಾಗಿ ಮೊದಲು ಅಪ್ಲೋಡ್ ಮಾಡಿದ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ರಾಕೇಶ್ 8105 ಎಂಬ ಐಡಿಯಿಂದ ಅಪ್ಲೋಡ್ ಆಗಿರುವ ಸುಳಿವು ಸಿಕ್ಕಿದೆ. ಹಾಗಾಗಿ, ರಾಕೇಶ್ 8105 ಐಡಿ ಯಾರದ್ದು ಎಂಬುದು ಸೇರಿ ಆತನ ವಿವರ ಒದಗಿಸುವಂತೆ ಹಲೋ ಆಪ್ ಅಭಿವೃದ್ಧಿಪಡಿಸಿದ ಕಂಪನಿ ಮತ್ತು ಸಿಐಡಿ ಸೈಬರ್ ಲಾಬ್ನಲ್ಲಿ ಪೊಲೀಸರು ಮಾಹಿತಿ ಕೋರಿದ್ದಾರೆ.