

ಮಂಗಳೂರು : ಎಸ್‌ಎಸ್‌ಎಲ್‌ಸಿ ಕೊಂಕಣಿ ತೃತೀಯ ಭಾಷೆಯ ಪರೀಕ್ಷೆಯಲ್ಲಿ ಕಾರ್ಕಳ ಎಸ್‌ವಿಟಿಯ ಕೌಸಲ್ಯ, ಮಂಗಳೂರು ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ಶೃದ್ಧಾ ಶೇಟ್, ನಮ್ರತಾ ನಾಯಕ್, ಮೂಡುಬೆಳ್ಳೆ ಸಂತ ಲಾರೆನ್ಸ್ ಹೈಸ್ಕೂಲ್‌ನ ಆದಿತ್ಯ , ಸೋನಲ್ ಪಿರೇರಾ ಮತ್ತು ಧನುಶ್ ತಲಾ 100 ಅಂಕ ಪಡೆದಿದ್ದಾರೆ.
ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಕೊಂಕಣಿ ಶಿಕ್ಷಕರ ನೇಮಕಾತಿಯಾದ ಹತ್ತು ಶಾಲೆಗಳ ಪೈಕಿ ಈ ಮೂರು ಶಾಲೆಗಳ ಒಟ್ಟು ಆರು ವಿದ್ಯಾರ್ಥಿಗಳು ತಲಾ ನೂರು ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಕಳೆದ ಸಾಲಿನಲ್ಲಿ ಪ್ರಥಮ ಬಾರಿಗೆ ಮಂಗಳೂರಿನ ನಲಂದಾ ಆಂಗ್ಲ ಮಾಧ್ಯಮ ಶಾಲೆಯ ಪೂರ್ಣಿಮಾ ಪ್ರಭು 100 ಅಂಕ ಪಡೆದಿದ್ದರು. ಈ ಬಾರಿ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ತಲಾ 3ಸಾವಿರ ರೂ. ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಲಾಗುವುದು.
ರಾಜ್ಯದಲ್ಲಿ ಕಳೆದ ಹನ್ನೆರಡು ವರುಷಗಳಲ್ಲಿ 4000 ವಿದ್ಯಾರ್ಥಿಗಳು ದೇವನಾಗರಿ ಲಿಪಿಯಲ್ಲಿ ಕೊಂಕಣಿ ಶಿಕ್ಷಣ ಪಡೆದಿದ್ದಾರೆ ಎಂದು ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಕಸ್ತೂರಿ ಮೋಹನ್ ಪೈ ಮತ್ತು ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.