

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣತೆಗೆ ಸೀಮಿತವಾಗದೇ ಗುಣಾತ್ಮಕ ಲಿತಾಂಶವನ್ನು ಪಡೆಯಲು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಕ್ಷರತಾ ಇಲಾಖೆ, ಎ.ಸಿ.ಸಿ ಸಿಮೆಂಟ್ ಬುಧವಾರ ಕೈಗೊಂಡಿದ್ದ 2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಸಮೃದ್ಧಿ ಪುಸ್ತಕ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಮುನಿ ಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಎನ್.ಸುಕನ್ಯಾ, ಉಮಾದೇವಿ, ವೆಂಕಟೇಶಪ್ಪ, ಶ್ರೀನಿವಾಸ್ ಮೂರ್ತಿ, ಕೃಷ್ಣಪ್ಪ, ನರೇಂದ್ರ ಕುಮಾರ್, ಸಿಮೆಂಟ್ ವ್ಯವಸ್ಥಾಪಕ ಪ್ರಶಾಂತ್ ದೇಶ್ ಮುಖ್ ಮತ್ತಿತರರು ಇದ್ದರು.
*ಕಲಿಕಾ ಸಂಜೀವಿನಿ ಪುಸ್ತಕ ವಿತರಣೆ
ಎಸಿಸಿ ಸಿಮೆಂಟ್ ಕಂಪನಿ ಸಹಯೋಗದಲ್ಲಿ ಶಿಕ್ಷಣ ಇಲಾಖೆಯು ಜಿಲ್ಲೆಯ 10ನೇ ತರಗತಿಯ 5 ಸಾವಿರ ವಿದ್ಯಾರ್ಥಿಗಳಿಗೆ 30 ಸಾವಿರ ಕಲಿಕಾ ಸಂಜೀವಿನಿ ಅಭ್ಯಾಸ ಪುಸ್ತಕಗಳನ್ನು ವಿತರಿಸುತಿದ್ದು ಇದು ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಗೆ ಸಹಕಾರಿಯಾಗಿದೆ. ಇದರ ಮೂಲಕ ಮನೆಯಲ್ಲಿ ಪ್ರತಿದಿನ ಕನಿಷ್ಠ ಮೂರು ಗಂಟೆ ಕಾಲ ಅಭ್ಯಾಸ ಖಾತ್ರಿ, ವಿರ್ದಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಿ, ಆತ್ಮವಿಶ್ವಾಸ ತುಂಬಲು ಪ್ರೇರಣಾ ತರಗತಿಗಳ ಆಯೋಜನೆ, ಕಲಿಕಾ ದೌರ್ಬಲ್ಯ ನಿವಾರಣೆ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ.
*ಮೂರನೇ ಪರಿಶೀಲನಾ ಸಭೆ
ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಪ್ರಗತಿ ಪರಿಶೀಲನಾ ಸಭೆಯನ್ನು ಈಗಾಗಲೇ ನಡೆಸಲಾಗಿದೆ. ಇದರಲ್ಲಿ ಉತ್ತಮ ಫಲಿತಾಂಶ ಗಳಿಕೆ, ನಿರೀಕ್ಷೆಯ ಚಟುವಟಿಕೆ, ಸುಧಾರಣಾ ಕ್ರಮಗಳು, ಕಳಪೆ ಫಲಿಂತಾAಶದ ಶಾಲೆಗಳಿಗೆ ಹೊಣೆಗಾರಿಕೆ, ಕಲಿಕೆಯಲ್ಲಿ ಹಿಂದುಳಿದ ಮತ್ತು ಕಲಿಕೆಯಲ್ಲಿ ಪ್ರಗತಿ ಹೊಂದಿರುವ ವಿದ್ಯಾರ್ಥಿಗಳೊಂಡನೆ ಸಂಯೋಜನೆಯ ಬಗ್ಗೆ ಚರ್ಚಿಸಿ, ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.
*ಶಾಲೆಗಳಲ್ಲಿ ಪಾಲಕರ ಸಭೆ
ಪ್ರತಿ 15 ದಿನಗಳಿಗೊಮ್ಮೆ ಶಾಲೆಗಳಲ್ಲಿ ಪಾಲಕರ ಸಭೆಯನ್ನು ನಡೆಸಿ, ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚಿಸಲು ಸೂಚಿಸಲಾಯಿತು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳ ನಿರ್ವಹಣೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ನಿಗಾ ವಹಿಸುವ ಜವಾಬ್ದಾರಿ ವಹಿಸುವುದು, ಶಿಕ್ಷಕರು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಹಾಗೂ ಸೂಕ್ತ ಮಾರ್ಗದರ್ಶನ, ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆ ಕೈಗೊಂಡು ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಬಿಇಒ ಹಾಗೂ ನೋಡಲ್ ಅಧಿಕಾರಿಗಳು ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳ ಸ್ಥಿತಿಗತಿಗಳ ಕುರಿತು ವರದಿ ನೀಡಲು, ಮುಂಬರುವ ಎರಡು ತಿಂಗಳ ಕಾಲಾವಧಿಯಲ್ಲಿ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸಲು, ಕಳೆದ ಬಾರಿಗಿಂತಲೂ ರಾಜ್ಯದಲ್ಲಿ ಚಿಕ್ಕಬಳ್ಳಾಪುರವು ಉತ್ತಮ ಸ್ಥಾನವನ್ನು ಗಳಿಸುವಂತಾಗಲು ಸಲಹೆ ಸೂಚನೆಗಳನ್ನು ನೀಡಲಾಯಿತು. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯೋಪಾಧ್ಯಯರೊಂದಿಗೆ ಸಂವಾದ ನಡೆಸಲಾಯಿತು.