ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಗೊಳಿಸಲು ಸಜ್ಜಾಗಿ

16 mbl ph 1
Published on

ವಿಜಯವಾಣಿ ಸುದ್ದಿಜಾಲ ಮುಳಬಾಗಿಲು

ಜಿಲ್ಲೆಯಲ್ಲಿ ವಿದ್ಯಾರ್ಥಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ನಗರದ ಡಿವಿಜಿ ಗಡಿಕನ್ನಡ ಭವನದಲ್ಲಿ ಮಂಗಳವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಸಭೆ, ತಾಲೂಕು ಮಟ್ಟದ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಮತ್ತು ಪರೀಕ್ಷಾ ಸಿಬ್ಬಂದಿ ಪೂರ್ವಭಾವಿ ಸಭೆಯಲ್ಲಿ ದಾನಿಗಳು ನೀಡಿದ್ದ ಮಾಸ್ಕ್‌ಗಳನ್ನು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಹಸ್ತಾಂತರಿಸಿ ಮಾತನಾಡಿದರು.

ಕೋಲಾರ ಜಿಲ್ಲೆಯಲ್ಲಿ ಪರೀಕ್ಷೆ ಯಶಸ್ವಿಗೊಳಿಸಬೇಕೆಂದು ಶಿಕ್ಷಣ ಸಚಿವರು ಕೋರಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲಾಗುವುದು ಎಂದರು.

ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಮಾತನಾಡಿ, ಗ್ರಾಪಂ ಮಟ್ಟದ ಪರೀಕ್ಷಾ ಕೇಂದ್ರಗಳಲ್ಲಿ ತಾಪಂ ಮತ್ತು ಗ್ರಾಪಂಗಳ ಮೂಲಕ ಸ್ಯಾನಿಟೈಸಿಂಗ್ ಸೇರಿ ಸೋಂಕು ನಿವಾರಣೆ ಕ್ರಮ ಕೈಗೊಳ್ಳಲಾಗುವುದು. ನಗರದ 4 ಕೇಂದ್ರಗಳನ್ನು ನಗರಸಭೆಯಿಂದ ನಿರ್ವಹಣೆ ಮಾಡಲಾಗುವುದು. ಗ್ರಾಮಾಂತರ ಪ್ರದೇಶಗಳ ಬಹುತೇಕ ಶಾಲೆಗಳು ದುಸ್ಥಿತಿಗೆ ತಲುಪಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದವನ್ನು ಸಚಿವರು ಮೀಸಲಿಡಬೇಕು ಎಂದು ಕೋರಿದರು.

ಬಿಜೆಪಿ ಮುಖಂಡ ಆಲಂಗೂರು ವೈ.ಸುರೇಂದ್ರಗೌಡ, ಬಿಇಒ ಡಿ.ಗಿರಿಜೇಶ್ವರಿ ದೇವಿ ಮಾತನಾಡಿದರು.

ತಹಸೀಲ್ದಾರ್ ಕೆ.ಎನ್.ರಾಜಶೇಖರ್, ತಾಪಂ ಇಒ ಎಂ.ಬಾಬು, ಎಪಿಎಂಸಿ ಅಧ್ಯಕ್ಷ ಪಿ.ವೆಂಕಟೇಶಪ್ಪ, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ಮುಖ್ಯಶಿಕ್ಷಕ ವಿ.ರಂಗಸ್ವಾಮಿ, ಶಿಕ್ಷಕರಾದ ಎಂ.ವಿ.ಜನಾದರ್ನ್, ಸೊಣ್ಣಪ್ಪ, ವಿ.ಜಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net