31 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು

20230321_112705- ..04
Published on

ಚಿತ್ರದುರ್ಗ: ಜಿಲ್ಲೆಯ 98 ಕೇಂದ್ರಗಳಲ್ಲಿ ಮಾ.31 ರಿಂದ ಏಪ್ರಿಲ್ 15 ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ‌್ಯವನ್ನು ಸಮನ್ವಯದಿಂದ ನಿರ್ವಹಿಸುವಂತೆ ಅಧಿಕಾರಿಗಳಿಗೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಗೂ 6 ನೇ ತರಗತಿ ಆದರ್ಶ ಶಾಲೆ ಪ್ರವೇಶ ಪರೀಕ್ಷೆ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ಮಾರ್ಗದರ್ಶಿ ನಿಯಮಗಳ ಕಡ್ಡಾಯವಾಗಿ ಪಾಲಿಸಬೇಕು.

ಪರೀಕ್ಷಾ ಪತ್ರಿಕೆಗಳಿರುವ ತಾಲೂಕು ಖಜಾನೆಗಳಿಗೆ ದಿನದ 24/7 ಪೊಲೀಸ್ ಬಂದೋಬಸ್ತ್ ಇರಬೇಕು. ಬಿಇಒ ನೇತೃತ್ವದ ಸಮಿತಿ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಖಜಾನೆಗಳಿಂದ ಪರೀಕ್ಷಾ ಕೇಂದ್ರಗಳಿಗೆ ಕಳಿಸಬೇಕು. ಇತರೆ ಕಾರಣಗಳಿಗೆ ಖಜಾನೆಯಲ್ಲಿರುವ ಸ್ಟ್ರಾಂಗ್ ರೂಂನ್ನು ತೆರೆಯವ ಪ್ರಸಂಗ ಎದುರಾದರೆ, ಸಮಿತಿ ಸದಸ್ಯರ ಸಮ್ಮುಖದಲ್ಲಿ ತೆರೆಯಬೇಕು. ಪ್ರಶ್ನೆ ಪತ್ರಿಕೆಗಳಿಗೆ ಹಾನಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಕೇಂದ್ರದ ಸುತ್ತ ನಿಷೇಧಾಜ್ಞೆ ಇರುತ್ತದೆ. ವಿದ್ಯಾರ್ಥಿ ಹಾಗೂ ನಿ ಯೋಜಿತ ಸಿಬ್ಬಂದಿ ಹೊರತು ಪಡಿಸಿ ಅನ್ಯರು ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವಂತಿಲ್ಲ. ನಕಲು, ಇತರೆ ಅಕ್ರಮಗಳಿಗೆ ಕಡಿವಾಣ ಹಾಕ ಬೇಕು. ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಬೇಕು. ಫೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿಲ್ಲ. ಪ್ರತಿ ಕೊಠಡಿಯಲ್ಲೂ ಗಡಿಯಾರ ಇರಬೇಕೆಂದು ಡಿಸಿ ಹೇಳಿದರು.

ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು 37 ಮಾರ್ಗ ಅಧಿಕಾರಿಗಳ ತಂಡ ರಚಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಲು ಚಿತ್ರದುರ್ಗದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದೆ. ಮಂಡಳಿ ಸೂಚಿಸುವ ಜಿಲ್ಲೆಗೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಕಳುಹಿಸಲಾಗುವುದು. ಚಿತ್ರದುರ್ಗದಲ್ಲಿ 6 ಕಡೆ ಮೌಲ್ಯಮಾಪನ ಕೇಂದ್ರಗಳಿರುತ್ತವೆ ಎಂದು ಮಾಹಿತಿ ನೀಡಿದರು.

ಜಿ.ಪಂ ಸಿಇಒ ಎಂ.ಎಸ್.ದಿವಾಕರ್, ಡಿಎಚ್‌ಒ ಡಾ.ರಂಗನಾಥ್ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.

-----

ಪ್ರವೇಶ ಪರೀಕ್ಷೆ

ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿರುವ ಆದರ್ಶ ಶಾಲೆ 6 ನೇ ತರಗತಿ ಪ್ರವೇಶಕ್ಕಾಗಿ ಮಾರ್ಚ್ 26 ರಂದು ಬೆಳಗ್ಗೆ 10. 30 ರಿಂದ ಮಧ್ಯಾಹ್ನ 1 ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 1493 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

---

ಆರನಕಟ್ಟೆಯಲ್ಲಿ ಹೊಸ ಕೇಂದ್ರ

ಹಿಂದಿನ ವರ್ಷವಿದ್ದ 97 ಪರೀಕ್ಷಾ ಕೇಂದ್ರಗಳ ಸಂಖ್ಯೆ ಈಗ 98 ಕ್ಕೆ ಏರಿಕೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿರಿಯೂರು ತಾಲೂಕು ಆರನಕಟ್ಟೆಯಲ್ಲಿ ಹೊಸ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 12002 ಬಾಲಕರು, 11426 ಬಾಲಕಿಯರು ಸೇರಿ 23428 ವಿದ್ಯಾ ರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net