ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ

13 Dwd 3
Published on

ಧಾರವಾಡ: ವಿದ್ಯಾಥಿಗಳು ಉನ್ನತ ಗುರಿ ಇಟ್ಟುಕೊಂಡು ಸತತ ಪರಿಶ್ರಮ ಪಡಬೇಕು. ಪರೀಕ್ಷಾ ಭಯದಿಂದ ಹೊರಬಂದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಶಿವಾನಂದ ಕಲ್ಲೂರ ಹೇಳಿದರು.
ನಗರದ ಮಾಳಮಡ್ಡಿ ಕೆ.ಇ. ಬೋರ್ಡ್ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುವರ್ಣ ಕರ್ನಾಟಕ ಸಂಭ್ರಮದ ಸಾಪ್ತಾಹಿಕ ಮಾಲಿಕೆಯಡಿ ಇತ್ತೀಚೆಗೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವಸಿದ್ಧತೆ ವಿಷಯ ಕುರಿತು ಅವರು ಮಾತನಾಡಿದರು.
ಸರಿಯಾದ ವೇಳಾಪತ್ರಿಕೆ ಮಾಡಿಕೊಂಡು ವ್ಯವಸ್ಥಿತ ಅಧ್ಯಯನದೊಂದಿಗೆ ಪರೀಕ್ಷೆಗೆ ಸನ್ನದ್ಧರಾಗಬೇಕು. ಭಯ, ಆತಂಕಗಳನ್ನು ನಿವಾರಣೆ ಮಾಡಲು ನಿರಂತರ ಅಭ್ಯಾಸದಲ್ಲಿ ತೊಡಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕೆ.ಇ. ಬೋರ್ಡ್ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದವರು ದೇಶ- ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ ಎಂದರು.
ಉಪ ಪ್ರಾಚಾರ್ಯ ಎನ್.ಎಸ್. ಗೋವಿಂದರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್, ಗಣಿತ ಸಂಪನ್ಮೂಲ ವ್ಯಕ್ತಿ ಎಸ್.ಎಸ್. ದೇವರಮನಿ, ಡಾ. ರಾಜಶೇಖರ ಬಸಟ್ಟಿ, ಬಿ.ಎಚ್. ಆರೇರ, ಎಸ್.ಡಿ. ಜಹಗೀರದಾರ, ಇತರರಿದ್ದರು.
ಬಸವರಾಜ ಪಾಟೀಲ ಸ್ವಾಗತಿಸಿದರು. ಅಭಿನಂದನ ಬಿ. ನಿರ್ವಹಿಸಿದರು. ಪ್ರಕಾಶ ಕವಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net