

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು 16 ನೇ ಸ್ಥಾನದಲ್ಲಿ ಇದ್ದು, ಈ ಬಾರಿ 1 ರಿಂದ 5ನೇ ಸ್ಥಾನ ಪಡೆಯುವ ಗುರಿ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ವಾರ್ಷಿಕ ಪರೀಕ್ಷಾ ಪದ್ಧತಿ ಕುರಿತು ಗುರುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯು 2019ರಲ್ಲಿ ಶೇ.80.65, 2020ರಲ್ಲಿ ಶೇ.74.4 ಫಲಿತಾಂಶ ಪಡೆದುಕೊಂಡಿತ್ತು. 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. 2022ರಲ್ಲಿ ಶೇ.91.37, 2023 ರಲ್ಲಿ ಶೇ.89.99 ಫಲಿತಾಂಶ ಬಂದಿತ್ತು. ಈ ಬಾರಿ ಮತ್ತಷ್ಟು ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು. ಕಳೆದ ಬಾರಿ ತಾಲೂಕು ವಾರು ಫಲಿತಾಂಶದಲ್ಲಿ ಪಿರಿಯಾಪಟ್ಟಣ (ಶೇ.97.42) ಅತಿ ಹೆಚ್ಚು ಹಾಗೂ ಕೆ.ಆರ್. ನಗರ ತಾಲೂಕು (ಶೇ.68.31) ಕಡಿಮೆ ಫಲಿತಾಂಶ ಪಡೆದುಕೊಂಡಿದ್ದು, ಈ ಬಾರಿ ಕೆ.ಆರ್. ನಗರ ತಾಲೂಕು ಫಲಿತಾಂಶ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಈ ಬಾರಿ ಪರೀಕ್ಷೆ ಎದುರಿಸಲು 40,174 ವಿದ್ಯಾರ್ಥಿಗಳ ಹೆಸರು ನೋಂದಣಿಯಾಗಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ 3,732, ಹುಣಸೂರು ತಾಲೂಕಿನಲ್ಲಿ 4,376, ಕೆ.ಆರ್. ನಗರ ತಾಲೂಕಿನಲ್ಲಿ 3,145, ಮೈಸೂರು ಉತ್ತರದಲ್ಲಿ 6,586, ಮೈಸೂರು ಗ್ರಾಮಾಂತರ ದಲ್ಲಿ 5,286, ಮೈಸೂರು ದಕ್ಷಿಣದಲ್ಲಿ 4,636, ನಂಜನಗೂಡು ತಾಲೂಕಿನಲ್ಲಿ 5,151, ಪಿರಿಯಾಪಟ್ಟಣ ತಾಲೂಕಿನಲ್ಲಿ 3,237, ತಿ.ನರಸೀಪುರ ತಾಲೂಕಿನಲ್ಲಿ 4,025 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಒಟ್ಟು 131 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುವುದು. ಜಿಲ್ಲೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ 447 ವಿಶೇಷ ಚೇತನ ವಿದ್ಯಾರ್ಥಿಗಳು ಇದ್ದು, ಇವರಿಗೆ ಪರೀಕ್ಷೆಯನ್ನು ಬರೆಯಲು ಸಹಾಯಕರನ್ನು ಒದಗಿಸಲಾಗುವುದು ಎಂದು ಹೇಳಿದರು.
ಕಳೆದ ಬಾರಿ ವಿಷಯವಾರು ಫಲಿತಾಂಶದಲ್ಲಿ ವಿದ್ಯಾರ್ಥಿಗಳು ವಿಜ್ಞಾನ (ಶೇ.90.28), ಇಂಗ್ಲಿಷ್ (93.05) ಹಾಗೂ ಸಮಾಜ (ಶೇ.93.90) ದಲ್ಲಿ ಹಿಂದುಳಿದಿರುವುದು ಕಂಡು ಬಂದಿದ್ದು, ಈ ವಿಷಯಗಳಲ್ಲಿ ಈ ಬಾರಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು. ಕಳೆದ ಬಾರಿ ಕನ್ನಡದಲ್ಲಿ ಶೆ.94.48, ಹಿಂದಿಯಲ್ಲಿ ಶೇ.94.52, ಗಣಿತದಲ್ಲಿ ಶೇ.95.20 ಫಲಿತಾಂಶ ಬಂದಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಅನುಕೂಲವಾಗುವಂತೆ ಪ್ರೇರಣಾ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳಲಾಗಿದೆ. ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಕಾ ಸಂಶಯಗಳನ್ನು ಶಿಕ್ಷಕರಿಂದ ಕೇಳಿ ಪರಿಹರಿಸಿಕೊಳ್ಳಲು ಹಿಂಜರಿಯುವುದರಿಂದ ಸಹಪಾಠಿಗಳಿಂದ ತಿಳಿದು ಕಲಿಯಲು ಗುಂಪು ರಚಿಸಲಾಗಿದೆ. ಈ ಗುಂಪನ್ನು ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಬೆಳಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಮುಖ್ಯ ಶಿಕ್ಷಕರು, ವಿಷಯ ಶಿಕ್ಷಕರು ಹಾಗೂ 10ನೇ ತರಗತಿಯಲ್ಲಿ ಸರಾಸರಿಗಿಂತ ಹೆಚ್ಚು ಮತ್ತು ಕಡಿಮೆ ಸಾಮರ್ಥ್ಯವಿರುವ ವಿದ್ಯಾರ್ತಿಗಳ ಪ್ರತ್ಯೇಕ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಕಲಿಕೆಗೆ ಪೂರಕವಾದ ಮಾಹಿತಿಗಳು ಹಾಗೂ ಚಟುವಟಿಕೆಗಳನ್ನು ವಿನಿಮಯ ಮಾಡಿಕೊ ಳ್ಳುವ ಮೂಲಕ ಫಲಿತಾಂಶ ಮುಖಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಹಾಗೂ ವ್ಯಕ್ತಿತ್ವ ರೂಪಿಸು ವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ವದ ಘಟ್ಟವಾಗಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಲಿಕಾ ಆಸಕ್ತಿ ಕಡಿಮೆ ಇರುವ ವಿದ್ಯಾರ್ಥಿಗಳ ಕಡೆಗೆ ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕು. ಕೆಲವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ಶಾಲೆಯಲ್ಲಿ ನಡೆಯುವ ಟೆಸ್ಟ್ ಮಾದರಿಯಲ್ಲಿಯೇ ಪರೀಕ್ಷೆ ಇರುತ್ತದೆ, ಆತಂಕ ಪಡಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಬೇಕು. ಸಾಕಷ್ಟು ವಿದ್ಯಾರ್ಥಿಗಳು ಉತ್ತಮವಾಗಿ ಓದಿಕೊಂಡಿರುತ್ತಾರೆ, ಆದರೆ ಪರೀಕ್ಷೆ ಎದುರಿಸಲು ವಿಫಲರಾಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವುದು ಅಗತ್ಯ ಎಂದರು.
ಪಾಲಕರ ನಿರೀಕ್ಷೆಗಳು ತುಂಬಾ ಇರುತ್ತದೆ. ಅವರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವೇ ಎಂಬ ಒತ್ತಡಕ್ಕೆ ಮಕ್ಕಳು ಸಿಲುಕಿಕೊಂಡಿರುತ್ತಾರೆ. ಇಂತಹ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ಪ್ರತಿಯೊಂದು ಮಕ್ಕಳನ್ನು ವೈಯಕ್ತಿಕವಾಗಿ ಕರೆದು ಅವರ ಸಮಸ್ಯೆಗಳನ್ನು ಆಲಿಸಬೇಕು. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನ ಪ್ರಕಾರ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವನ್ನು ಹೊಂದಿದ್ದೇನೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಕೃಷ್ಣರಾಜು, ಶಾಲಾ ಶಿಕ್ಷಣ ಇಲಾಖೆ ಸಹ ನಿರ್ದೇಶಕ ಪಾಂಡುರಂಗ, ಡಯಟ್ ಪ್ರಾಂಶುಪಾಲ ನಾಗರಾಜಯ್ಯ, ಬಿಇಡಿ ಕಾಲೇಜು ಪ್ರಾಂಶುಪಾಲರಾದ ಗೀತಾಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜು, ರೇವಣ್ಣ, ರಾಜು, ಶೋಭಾ, ಕೃಷ್ಣಪ್ಪ, ಮಾರೇಗೌಡ,ಕೃಷ್ಣ, ನಂಜುಂಡಯ್ಯ, ವಿವೇಕ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಯ್ಯ ಹಾಜರಿದ್ದರು.