ಮಾ.೨೫ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

sslc
Published on

ಮಡಿಕೇರಿ: ಮಾ.೨೫ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ.


ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮ ಪಡಿಸಲು ಶಿಕ್ಷಣ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದ್ದು, ಈ ಬಾರಿ ಒಟ್ಟು ೬,೫೧೭ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಹೆಜ್ಜೆ ಹಾಕುವ ಮೊದಲ ಪ್ರಮುಖ ಘಟ್ಟವಾಗಿದ್ದು, ಇಲ್ಲಿನ ಸಾಧನೆ ಜೀವನದ ಎಲ್ಲ ಹಂತಗಳಲ್ಲೂ ಪ್ರಭಾವ ಬೀರುತ್ತದೆ. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವು ೯ನೇ ಸ್ಥಾನಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶವು ರಾಜ್ಯ ಮಟ್ಟದಲ್ಲಿ ೫ನೇ ಸ್ಥಾನದೊಳಗೆ ಫಲಿತಾಂಶ ಪಡೆಯಲು ಶ್ರಮಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರೇಪಣೆ ಮೂಡಿಸಲು ಕ್ರಮ ಕೈಗೊಂಡಿದೆ.


ಪುನರಾವರ್ತನೆ, ವಿಶೇಷ ತರಗತಿ, ಗುಂಪು ಅಧ್ಯಯನ, ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ತಾಲೂಕು ಮಟ್ಟದಲ್ಲಿ ನಡೆಸಲಾಗಿದೆ. ಸರಳವಾಗಿ ವಿಷಯದ ಪುನರಾವರ್ತನೆ ಮಾಡುವ ಮೂಲಕ ಮಕ್ಕಳಲ್ಲಿ ಕಲಿಕೆಯ ಅಭಿರುಚಿ ಹೆಚ್ಚಿಸಲಾಗಿದೆ. ಆಪ್ತಸಮಾಲೋಚನೆ ಮೂಲಕವೂ ಪರೀಕ್ಷೆಯ ಬಗೆಗಿನ ಆತಂಕ, ಭಯ ಹೋಗಲಾಡಿಸುವ ಕೆಲಸ ಮಾಡಲಾಗಿದೆ.


ಪರೀಕ್ಷೆಗೆ ೬,೫೧೭ ವಿದ್ಯಾರ್ಥಿಗಳು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.೨೫ ರಿಂದ ಏ.೬ ರವರೆಗೆ ನಡೆಯಲಿದೆ. ಜಿಲ್ಲೆಯ ೨೭ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮಡಿಕೇರಿ ತಾಲೂಕಿನ ೮, ಸೋಮವಾರಪೇಟೆ ತಾಲೂಕಿನ ೧೧, ವಿರಾಜಪೇಟೆ ತಾಲೂಕಿನ ೮ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯ ೧೭೧ ಪ್ರೌಢಶಾಲೆಯ ೬,೫೧೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ ೩,೩೪೦ ಬಾಲಕರು ಮತ್ತು ೩,೧೭೭ ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಮಡಿಕೇರಿ ತಾಲೂಕಿನ ೪೩, ಸೋಮವಾರಪೇಟೆ ತಾಲೂಕಿನ ೭೧ ಮತ್ತು ವಿರಾಜಪೇಟೆ ತಾಲೂಕಿನ ೫೭ ಪ್ರೌಢಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.


ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಕೋರಲಾಗಿದೆ. ಹಾಗೆಯೇ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಮನವಿ ಮಾಡಲಾಗಿದೆ. ಸಿಸಿಟಿವಿ ಅಳವಡಿಸಲಾಗುತ್ತದೆ. ಜತೆಗೆ ವೆಬ್‌ಕಾಸ್ಟ್ ಮಾಡಲಾಗುತ್ತದೆ. ಡಯಟ್ ಹಿರಿಯ ಉಪನ್ಯಾಸಕರ ತಂಡವನ್ನು ರಚಿಸಿ ಜಾಗೃತಿ ದಳ ರಚಿಸಲಾಗಿದೆ ಎಂದು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net