

ಚಿಕ್ಕಬಳ್ಳಾಪುರ: ವಿಶೇಷ ಮಾರ್ಗದರ್ಶಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ನಡುವೆಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲಾವಾರು ಚಿಕ್ಕಬಳ್ಳಾಪುರ ಕಳಪೆ ಸಾಧನೆ ತೋರಿದ್ದು ಬೇಸರ ಮೂಡಿಸಿದೆ.
ಪ್ರಸಕ್ತ 2024-25 ನೇ ಸಾಲಿನಲ್ಲಿ ಪಾತಾಳಕ್ಕೆ ಕುಸಿದಂತೆ 22 ನೇ ಸ್ಥಾನಕ್ಕೆ ಬಂದಿದೆ. 2020 ನೇ ಸಾಲಿನಲ್ಲಿ ಪ್ರಥಮ, 2021 ನೇ ಸಾಲಿನಲ್ಲಿ ದ್ವಿತೀಯ ಸ್ಥಾನ, 2023 ನೇ ಸಾಲಿನಲ್ಲಿ 5 ನೇ ಸ್ಥಾನ ಪಡೆದಿದ್ದ ಜಿಲ್ಲೆಯು ಕಳೆದ ಸಾಲಿನಲ್ಲಿ 18 ನೇ ಸ್ಥಾನ ಪಡೆದಾಗಲೇ ವ್ಯಾಪಕ ಬೇಸರ ಮೂಡಿಸಿತ್ತು. ಇದಕ್ಕೆ ಜಿಲ್ಲಾಡಳಿತ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಶಿಕ್ಷಣ ತಜ್ಞರ ಮಾರ್ಗದರ್ಶನ, ವಿಶೇಷ ಪಠ್ಯ ಬೋಧನೆ, ಶಿಕ್ಷಕರ ಕಾರ್ಯಾಗಾರ, ಕಲಿಕಾ ನ್ಯೂನತೆಗಳ ಪರಿಹಾರ ಸೇರಿದಂತೆ ವಿವಿಧ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿತ್ತು.
*ಕನಿಷ್ಠ 16 ನೇ ಸ್ಥಾನದ ನಿರೀಕ್ಷೆ*
ವಿಶೇಷ ಬೋಧನಾ ವ್ಯವಸ್ಥೆಯ ಪರಿಶ್ರಮವನ್ನಾಧಾರಿಸಿ ಜಿಲ್ಲಾಡಳಿತವು ಕನಿಷ್ಠ 10 ರಿಂದ 15 ರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸುವಂತೆ 22 ನೇ ಸ್ಥಾನಕ್ಕೆ ಬಂದಿದೆ.
*ಕಟ್ಟುನಿಟ್ಟಿನ ಪರೀಕ್ಷೆ*
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ನಕಲು, ಅವ್ಯವಹಾರಗಳಿಗೆ ಅವಕಾಶ ನೀಡಿರಲಿಲ್ಲ. ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯ ಮೂಲಕ ಪರೀಕ್ಷಾ ಕೊಠಡಿಗಳ ಮೇಲೆ ನಿಗಾ ವಹಿಸಲಾಗಿತ್ತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.