ಜಿಲ್ಲೆಯಲ್ಲಿ 5,827 ವಿದ್ಯಾರ್ಥಿಗಳ ನೋಂದಣಿ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

SSLC Exam Prelims Meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಜೂ.14 ರಿಂದ 22ರವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆ-2 ನಡೆಯಲಿದೆ. ಇದಕ್ಕೆ 5,827 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 3,939 ಬಾಲಕರು ಹಾಗೂ 1,888 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಗಂಡು-661, ಹೆಣ್ಣು-244 ಸೇರಿದಂತೆ ಒಟ್ಟು 905, ಮದ್ದೂರಿನಲ್ಲಿ ಗಂಡು-808, ಹೆಣ್ಣು-368 ಸೇರಿ ಒಟ್ಟು 1,176, ಮಳವಳ್ಳಿ ತಾಲೂಕಿನಲ್ಲಿ ಗಂಡು-722, ಹೆಣ್ಣು-501 ಸೇರಿದಂತೆ ಒಟ್ಟು 1,223, ಮಂಡ್ಯ ದಕ್ಷಿಣ ವಲಯದಲ್ಲಿ ಗಂಡು-450, ಹೆಣ್ಣು-213 ಒಟ್ಟು 663, ಮಂಡ್ಯ ಉತ್ತರ ವಲಯದಲ್ಲಿ ಗಂಡು-124, ಹೆಣ್ಣು-56 ಸೇರಿ ಒಟ್ಟು 180, ನಾಗಮಂಗಲದಲ್ಲಿ ಗಂಡು-422, ಹೆಣ್ಣು-174 ಸೇರಿ ಒಟ್ಟು 596, ಪಾಂಡವಪುರದಲ್ಲಿ ಗಂಡು 426, ಹೆಣ್ಣು-198 ಒಟ್ಟು 624 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಗಂಡು-326, ಹೆಣ್ಣು-134 ಸೇರಿದಂತೆ ಒಟ್ಟು 460 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದರು.

19 ಪ್ರೌಢಶಾಲೆಗಳನ್ನು ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಿ ಪರೀಕ್ಷಾ ಮಂಡಳಿಗೆ ಮಾಹಿತಿ ಸಲ್ಲಿಸಲಾಗಿದೆ. ಎಲ್ಲ ಕೇಂದ್ರಕ್ಕೂ ಒರ್ವ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. 350 ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕೇಂದ್ರಕ್ಕೆ ಒರ್ವ ಉಪ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಅಂತೆಯೇ ಎಲ್ಲ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ದಿನದಂದು ಕೇಂದ್ರಗಳಿಗೆ ತಲುಪಿಸಲು ಮಾರ್ಗಾಧಿಕಾರಿ ಹಾಗೂ ಪ್ರತಿ ಬ್ಲಾಕ್‌ಗೆ ಒರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ನಡೆಯುವ ದಿನ ಕೇಂದ್ರದ ಸುತ್ತಲೂ 200 ಮೀ ಸುತ್ತಳತೆಯಲ್ಲಿ 144ನೇ ಕಲಂ ಜಾರಿಗೊಳಿಸಬೇಕು. ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಲ್ಲ. ಕೇಂದ್ರದೊಳಕ್ಕೆ ಮೊಬೈಲ್ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ, ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು. ಬ್ಲಾಕ್ ಹಂತದಲ್ಲಿ ಎಲ್ಲ ಪರೀಕ್ಷಾ ಕೇಂದ್ರಕ್ಕೆ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ಕೇಂದ್ರಕ್ಕೂ ಸ್ಥಾನಿಕ ಜಾಗೃತ ದಳ ಅಧಿಕಾರಿ, ಮೊಬೈಲ್ ಸ್ವಾಧೀನಾಧಿಕಾರಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಹಂತದಲ್ಲಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ಮಳೆಗಾಲ ಶುರುವಾಗಿರುವುದರಿಂದ ಪರೀಕ್ಷೆ ಕೊಠಡಿಗಳಲ್ಲಿ ನೀರು ಸೋರಿಕೆ ಇದ್ದರೆ, ಈಗಲೇ ಅದನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಡಿಡಿಪಿಐ ಎಚ್.ಶಿವರಾಮೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಬಿಇಒಗಳಾದ ಮಹದೇವ, ಚಂದ್ರಶೇಖರ್, ಸೌಭಾಗ್ಯ, ಶಿಕ್ಷಣಾಧಿಕಾರಿ ಚಂದ್ರಕಾಂತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net