ಮೇ 26ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಆರಂಭ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

SSLC exam pre-exam meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಮೇ 26 ರಿಂದ ಜೂ.2ರವರೆಗೆ ನಡೆಯಲಿದೆ. ಆದ್ದರಿಂದ ಪರೀಕ್ಷೆ ಯಾವುದೇ ಲೋಪದೋಷವಿಲ್ಲದೆ ಸುಗಮವಾಗಿ ನಡೆಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ 6,082 ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು 627 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6,669 ವಿದ್ಯಾರ್ಥಿಗಳು ಪರೀಕ್ಷೆ-2 ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 20 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಕೇಂದ್ರಕ್ಕೂ ಒರ್ವ ಪೇಪರ್ ಕಸ್ಟೋಡಿಯನ್ ನೇಮಕ ಮಾಡಲಾಗಿದೆ. ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್‌ಕ್ಯಾಸ್ಟಿಂಗ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಗೊಳಿಸಲಾಗಿದೆ. ಕೇಂದ್ರದ ಮೂಲ ಸೌಕರ್ಯದ ಬಗ್ಗೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಚೆಕ್ ಲಿಸ್ಟ್ ನೀಡಲಾಗಿದೆ. ಪರೀಕ್ಷಾ ದಿನಗಳಂದು ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ಲೋಪವಾಗದಂತೆ ಚೆಸ್ಕಾಂ ಇಲಾಖೆ ಗಮನಹರಿಸಿ. ಪರೀಕ್ಷೆ-1 ರಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಲು, ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡದಿರಲು ಹಾಗೂ ಶಾಲೆ ಬಿಡಲು ಕಾರಣಗಳೇನು ಎಂದು ಪರಿಶೀಲಿಸಿ. ಮುಂದಿನ ವರ್ಷದಲ್ಲಿ ಉತ್ತಮ ಫಲಿತಾಂಶ ತರಲು ಯೋಜನೆ ತಯಾರಿಸಿ. ಕಡಿಮೆ ಅಂಕಗಳಿಸಿರುವ ಶಾಲೆಯ ಪ್ರಾಂಶುಪಾಲರು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಮನಸ್ಥಿತಿ ಕುರಿತು ವರದಿ ತಯಾರಿಸಿ ಮುಂದಿನ ಸಭೆಯಲ್ಲಿ ಹಾಜರಾಗುವುದು ಕಡ್ಡಾಯ ಎಂದು ತಿಳಿಸಿದರು.

ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದೊರೆತಿರುವುದು ಶ್ಲಾಘನೀಯವಾದರೂ, ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಕೆಲಸ ನಿರ್ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ನಿರ್ವಹಿಸಿ. ಈ ಬಾರಿ ಜಿಲ್ಲೆಯಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಉತ್ತೀರ್ಣರಾಗಲು ತರಗತಿ ನಡೆಸಲಾಗಿದೆ. ನೂರಕ್ಕೆ ನೂರು ಫಲಿತಾಂಶ ತರುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ಶಾಲೆ ಪ್ರಾರಂಭವಾದ ನಂತರ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಪಾಲಕರ ಸಭೆ ಆಯೋಜಿಸಿ. ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣ ಹಾಗೂ ಇತರೆ ಚಟುವಟಿಕೆಗಳಿಂದ ದೂರವಿರಲು ಕೈಗೊಳ್ಳಬೇಕಾದ ಕ್ರಮ ಮತ್ತು ಓದಿನ ಮಹತ್ವ ಕುರಿತು ಅರಿವು ಮೂಡಿಸಿ. ಮುಂದಿನ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ನೂರಕ್ಕೆ ಶೇ.75 ರಿಂದ 80ರಷ್ಟು ಫಲಿತಾಂಶ ತರುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಸಭೆಯಲ್ಲಿ ಡಿಡಿಪಿಐ ಎಚ್.ಶಿವರಾಮೇಗೌಡ, ಶಿಕ್ಷಣಾಧಿಕಾರಿ ಚಂದ್ರಕಾಂತಾ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಬಿಇಒಗಳಾದ ಮಹದೇವು, ಸೌಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net