

ತುಮಕೂರು: ಕರೊನಾಘಾತದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಮೊದಲ ದಿನ ಸುಸೂತ್ರವಾಗಿ ನಡೆಯಿತು. ಶಿರಾ ತಾಲೂಕಿನ ಕಾಮಗೊಂಡನಹಳ್ಳಿ 15 ವರ್ಷದ ವಿದ್ಯಾರ್ಥಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಬರೆಯಲಾಗದೆ ದೂರ ಉಳಿಯುವಂತಾಯಿತು. ಅದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಆತಂಕವಿಲ್ಲದೆ ಪರಸ್ಪರ ಅಂತರ, ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ತುಮಕೂರು ಶೈಕ್ಷಣಿಕ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ದಿನ ಗೈರಾದವರ ಸಂಖ್ಯೆ 993. ಜಿಲ್ಲೆಯ ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ 34212 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ 33219 ವಿದ್ಯಾರ್ಥಿಗಳು ಹಾಜರಾಗಿದ್ದರು. 993 ವಿದ್ಯಾರ್ಥಿಗಳು ಗೈರಾಗಿದ್ದು ಒಟ್ಟು 144 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ 20329 ಬಾಲಕರು ಹಾಗೂ 16977 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಕಂಟೇನ್ಮೆಂಟ್‌ನ 41 ವಿದ್ಯಾರ್ಥಿಗಳು!: ಜಿಲ್ಲೆಯಲ್ಲಿ ಕಂಟೇನ್ಮೆಂಟ್ ವಲಯದ 41 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರಿಗೂ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನೆರೆಯ ಆಂಧ್ರಪ್ರದೇಶದ ರಾಯದುರ್ಗಕ್ಕೆ ತೆರಳಿದ್ದ ಶಿರಾ ತಾಲೂಕಿನ ಕಾಮಗೊಂಡನಹಳ್ಳಿ ವಿದ್ಯಾರ್ಥಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಾಗಲಿಲ್ಲ. ಈತನ ಸ್ನೇಹಿತರು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು. ತುಮಕೂರು ದಕ್ಷಿಣ ಜಿಲ್ಲೆಯಲ್ಲಿ 21139 ವಿದ್ಯಾರ್ಥಿಗಳ ಪೈಕಿ 20733 ವಿದ್ಯಾರ್ಥಿಗಳು ಹಾಜರಾಗಿದ್ದು, 406 ವಿದ್ಯಾರ್ಥಿಗಳು ಗೈರಾಗಿದ್ದರು. ನೆರೆ ರಾಜ್ಯಗಳ 7 ವಿದ್ಯಾರ್ಥಿಗಳು, ಕಂಟೇನ್ಮೆಂಟ್ ಪ್ರದೇಶಗಳ 32, 207 ವಲಸೆ ವಿದ್ಯಾರ್ಥಿಗಳಲ್ಲಿ 192 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 15 ವಲಸೆ ವಿದ್ಯಾರ್ಥಿಗಳು ಗೈರಾಗಿದ್ದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಣಿಯಾಗಿರುವ 13073 ವಿದ್ಯಾರ್ಥಿಗಳ ಪೈಕಿ 12486 ವಿದ್ಯಾರ್ಥಿಗಳು ಹಾಜರಾಗಿದ್ದು, 587 ವಿದ್ಯಾರ್ಥಿಗಳು ಗೈರಾಗಿದ್ದರು. ನೆರೆರಾಜ್ಯಗಳ 8 ವಿದ್ಯಾರ್ಥಿಗಳು, ಕಂಟೇನ್ಮೆಂಟ್ ಪ್ರದೇಶಗಳ 9, ಅನಾರೋಗ್ಯಕ್ಕೀಡಾಗಿದ್ದ ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು. 96 ವಿದ್ಯಾರ್ಥಿಗಳು ವಸತಿ ನಿಲಯದಿಂದ, 308 ವಲಸೆ ವಿದ್ಯಾರ್ಥಿಗಳಲ್ಲಿ 307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಥರ್ಮಲ್ ಸ್ಕ್ರೀನಿಂಗ್: ಪಿಯು ಪರೀಕ್ಷೆ ಗೊಂದಲದ ಬಳಿಕ ಎಚ್ಚೆತ್ತುಕೊಂಡಿದ್ದ ಶಿಕ್ಷಣ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿತ್ತು. ಬೆಳಗ್ಗೆ 8.30ರಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಬಂದಿದ್ದರಿಂದ ಎಲ್ಲಿಯೂ ನೂಕು-ನುಗ್ಗಲು ಉಂಟಾಗಿರಲಿಲ್ಲ. ಪ್ರತಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪರೀಕ್ಷೆ ಕೇಂದ್ರದೊಳಗೆ ಬಿಡಲಾಯಿತು. ಪರಸ್ಪರ ಅಂತರ ಕಾಪಾಡಲು ಎಲ್ಲ ಕೇಂದ್ರಗಳಲ್ಲೂ ಮೊದಲೇ ಗುರುತುಗಳನ್ನು ಹಾಕಲಾಗಿತ್ತು. ಪಾಲಕರೂ ಸಹ ಪರೀಕ್ಷಾ ಕೇಂದ್ರಗಳಿಂದ ದೂರದಲ್ಲೇ ಮಕ್ಕಳನ್ನು ಬಿಟ್ಟು ಮನೆಗೆ ತೆರಳಿದ್ದರಿಂದ ಅಷ್ಟಾಗಿ ನೂಕುನುಗ್ಗಲಾಗಲಿಲ್ಲ. ಎಲ್ಲ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಂದಿದ್ದರು.
ಪರಸ್ಪರ ಅಂತರವಿಲ್ಲ: ಪರೀಕ್ಷೆಗೆ ತೆರಳುವ ಮುನ್ನ ಪರಸ್ಪರ ಅಂತರ ಕಾಪಾಡಿಕೊಂಡ ಶಿಸ್ತುಬದ್ಧವಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಿದ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಬಳಿಕ ಖುಷಿಯಲ್ಲಿ ಈ ನಿಯಮವನ್ನೇ ಮರೆತರು. ಎಲ್ಲರೂ ಜತೆಜತೆಯಾಗಿ ಹೊರಬಂದರು. ಕೆಲವರು ಮಾಸ್ಕ್ ಕೂಡ ಹಾಕದೇ ಇದ್ದುದು ಆತಂಕಕ್ಕೆ ಕಾರಣವಾಗಿತ್ತು. ಪರೀಕ್ಷಾ ಕೇಂದ್ರದ ಉಸ್ತುವಾರಿ ಹೊತ್ತಿದ್ದ ನೋಡಲ್ ಅಧಿಕಾರಿಗಳು ಮಕ್ಕಳಿಗೆ ತಿಳಿಹೇಳುವುದನ್ನು ಮರೆತಿದ್ದರು.
ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ: ಆಂಧ್ರಪ್ರದೇಶದ ಕರ್ನೂಲ್‌ನಿಂದ ಬಂದಿದ್ದ ಸಿದ್ಧಗಂಗಾ ಮಠದ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಮೊದಲ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದ್ದ ಈ ವಿದ್ಯಾರ್ಥಿಗೆ ತುಮಕೂರಿನ ಪ್ರಯೋಗಾಲಯದಲ್ಲಿ 2ನೇ ಪರೀಕ್ಷೆಯಲ್ಲಿ ನೆಗಟಿವ್ ಬಂದಿತ್ತು. ಹಾಗಾಗಿ, ಆತನಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಕಂಟೇನ್ಮೆಂಟ್ ವಲಯ ಬೈರಸಂದ್ರದಿಂದ ಬಂದಿದ್ದ ವಿದ್ಯಾರ್ಥಿಯನ್ನು ಸಹ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಯಿತು. ಮಠದ ಮುಖ್ಯದ್ವಾರದಿಂದಲೇ ದೈಹಿಕ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಯಿತು. ಮಠದಲ್ಲಿ 4 ಪರೀಕ್ಷಾ ಕೇಂದ್ರಗಳಲ್ಲಿ 1900 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಎಲ್ಲೆಡೆ ಸ್ಯಾನಿಟೈಸೇಷನ್: ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ತುಮಕೂರಿನ 85 ಹಾಗೂ ಮಧುಗಿರಿಯ 59 ಸೇರಿ ಒಟ್ಟು 144 ಪರೀಕ್ಷಾ ಕೇಂದ್ರಗಳಲ್ಲಿನ ಎಲ್ಲ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ದೈಹಿಕ ಶಿಕ್ಷಣ ಶಿಕ್ಷಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ವಯಂ ಸೇವಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಗೊಂದಲಗಳನ್ನು ಬಗೆಹರಿಸುತ್ತಿದ್ದ್ದುದು ಕಂಡುಬಂತು.