

ಬೆಂಗಳೂರು : ಗ್ರಾಮಾಂತರ ಜಿಲ್ಲೆಯಲ್ಲಿ ನಿರೀಕ್ಷೆಯಂತೆಯೇ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 13,359 ವಿದ್ಯಾರ್ಥಿಗಳಲ್ಲಿ 13,334 ಹಾಜರಾಗಿದ್ದು, 25 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಪೈಕಿ ಖಾಸಗಿಯಾಗಿ 289 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 286 ಹಾಜರಿ ಹಾಗೂ ಮೂವರು ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಗಂಗಮಾರೇಗೌಡ ತಿಳಿಸಿದ್ದಾರೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 106 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ನಗುಮುಖದೊಂದಿಗೆ ವಿದ್ಯಾರ್ಥಿಗಳು ಮನೆಗಳ ಕಡೆ ಹೆಜ್ಜೆಹಾಕಿದರು. ಕರೊನಾತಂಕದ ನಡುವೆ ಗಜಪ್ರಸವದಂತಾಗಿದ್ದ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆ ಕಡೆಗೂ ಯಾವುದೇ ಗೊಂದಲವಿಲ್ಲದೆ ನಿರಾತಂಕವಾಗಿ ನೆರವೇರಿದೆ.
ವಿದ್ಯಾರ್ಥಿಗಳೊಂದಿಗೆ ಸಚಿವ ಕುಶಲೋಪರಿ:ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೊಸಕೋಟೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಜತೆಗೆ ಬಿಸ್ಕೆಟ್ ಹಂಚಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ಪರೀಕ್ಷೆಗಳು ಆರಂಭವಾಗುವ 1 ಗಂಟೆ ಮೊದಲೇ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವರು ಪರೀಕ್ಷಾ ಕೇಂದ್ರದಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಕುಡಿಯುವ ನೀರು, ಶೌಚಗೃಹ ಸೇರಿ ಕರೊನಾ ನಿಯಮಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು. ಪರೀಕ್ಷಾ ಕೊಠಡಿಗಳಿಗೆ ತೆರಳಲು ಅನುವಾಗುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಕುಶಲೋಪರಿ ವಿಚಾರಿಸಿ ಧೈರ್ಯ ತುಂಬಿದರು. ಕರೊನಾ ನಿಯಮಗಳನ್ನು ಪಾಲಿಸಿ ಯಾವುದೇ ಆತಂಕವಿದಲ್ಲದೆ ಪರೀಕ್ಷೆ ಬರೆಯಿರಿ. ಇದೇ ರೀತಿ 22 ರಂದು ನಡೆಯುವ ಪರೀಕ್ಷೆಯನ್ನು ನಿರ್ಭಿತಿಯಿಂದ ಎದುರಿಸಿದ ಎಂದು ಹಾರೈಸಿದರು.
ಸೋಂಕಿತ ವಿದ್ಯಾರ್ಥಿಗೂ ಪರೀಕ್ಷೆ: ಹೊಸಕೋಟೆ ತಾಲೂಕಿನ ಒಬ್ಬ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದ್ದು, ಕೋವಿಡ್ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ನೆಲಮಂಗಲದಲ್ಲಿ 4 ವಿದ್ಯಾರ್ಥಿಗಳಿಗೆ ಹಾಗೂ ದೇವನಹಳ್ಳಿಯ ಓರ್ವ ವಿದ್ಯಾರ್ಥಿಗೆ ಕೋವಿಡ್ ಗುಣಲಕ್ಷಣ ಕಂಡುಬಂದಿದ್ದು, ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.
ಡಿಸಿ ಭೇಟಿ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ದೇವನಹಳ್ಳಿಯ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ, ಗ್ರಾಮಾಂತರ ಅನುದಾನಿತ ಪ್ರೌಢಶಾಲೆ, ದೇವನಹಳ್ಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಆಕ್ಸ್‌ಪರ್ಡ್ ಪ್ರೌಢಶಾಲೆಗೆ ಭೇಟಿ ನೀಡಿ, ಸಿದ್ಧತೆ, ಆರೋಗ್ಯ ತಪಾಸಣೆ ಕೌಂಟರ್, ಪರಸ್ಪರ ಅಂತರದ ಮಾರ್ಕಿಂಗ್ ವ್ಯವಸ್ಥೆ ಪರಿಶೀಲಿಸಿ ಶುಭ ಹಾರೈಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹನುಮಂತಪ್ಪ ಮತ್ತಿತರರು ಇದ್ದರು.