ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಸೂತ್ರ; ಜಿಲ್ಲಾದ್ಯಂತ 37,459 ವಿದ್ಯಾರ್ಥಿಗಳು ಹಾಜರಿ

mysore
Published on

ಮೈಸೂರು: ಜಿಲ್ಲಾದ್ಯಂತ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಸುಸೂತ್ರವಾಗಿ ನಡೆಯಿತು.


ಬಿಗಿ ಭದ್ರತೆ ನಡುವೆ ವಿದ್ಯಾರ್ಥಿಗಳು ಮೊದಲ ದಿನ ಪ್ರಥಮ ಭಾಷೆ(ಕನ್ನಡ, ಉರ್ದು, ತೆಲುಗು, ಹಿಂದಿ, ಮರಾಠಿ, ತಮಿಳು, ಇಂಗ್ಲಿಷ್, ಸಂಸ್ಕೃತ) ಪರೀಕ್ಷೆ ಬರೆದರು. ಜಿಲ್ಲೆಯಲ್ಲಿ 37,459 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 446 ಅಭ್ಯರ್ಥಿಗಳು ಗೈರಾಗಿದ್ದರು. ಆದರೆ, ಯಾವುದೇ ವಿದ್ಯಾರ್ಥಿಯೂ ಡಿಬಾರ್ ಆಗಿಲ್ಲ.


37,386 ಹೊಸ ವಿದ್ಯಾರ್ಥಿಗಳ ಪೈಕಿ 36,988, 527 ಪುನರಾವರ್ತಿರ ಪೈಕಿ 471 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 54 ಪುನರಾವರ್ತಿರು, 392 ಹೊಸಬರು ಪರೀಕ್ಷೆಗೆ ಗೈರಾಗಿದ್ದರು.

ನಗರದ 34 ಕೇಂದ್ರಗಳೂ ಸೇರಿದಂತೆ ಜಿಲ್ಲೆಯ 132 ಕೇಂದ್ರಗಳಲ್ಲಿ ಮಕ್ಕಳು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ಎದುರಿಸಿದರು. ಪರೀಕ್ಷಾ ಅಕ್ರಮ ತಡೆಗೆ ಹದ್ದಿನ ಕಣ್ಣು ಇಡಲಾಗಿತ್ತು. ಹೀಗಾಗಿ ಪರೀಕ್ಷಾ ನಕಲಿನಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.
ಪ್ರಶ್ನೆ ಪತ್ರಿಕೆಗಳನ್ನಿಡುವ ಸ್ಟ್ರಾಂಗ್ ರೂಂ, ಕಾರಿಡಾರ್‌ಗಳೊಂದಿಗೆ ಪ್ರತಿ ಪರೀಕ್ಷಾ ಕೊಠಡಿಗಳಿಗೂ ಅಳವಸಲಾಗಿದ್ದ ಸಿಸಿ ಕ್ಯಾಮರಾ ಮೂಲಕ ನಿಗಾ ವಹಿಸಲಾಯಿತು.


ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಲು 54 ಮಾರ್ಗಗಳನ್ನು ನಿಗದಿಪಡಿಸಲಾಗಿತ್ತು. ಎಲ್ಲ ಮಾರ್ಗಗಳಲ್ಲೂ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಸಂಚರಿಸಿದರು. ಕೇಂದ್ರಗಳಲ್ಲಿ ಮುಖ್ಯ ಸೂಪರಿಂಟೆಂಡೆಂಟ್ ಸೇರಿದಂತೆ ಕೊಠಡಿಗಳಿಗೆ ಅನುಗುಣವಾಗಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಪರೀಕ್ಷಾ ಅಕ್ರಮ ತಡೆಗಾಗಿ 4 ಫ್ಲೈಯಿಂಗ್ ಸ್ವ್ಕ್ಯಾಡ್‌ಗಳು ದಿಢೀರ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇವರೊಂದಿಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಸನ್ನದ್ಧರಾಗಿದ್ದರು.


ಕಳೆದ ವರ್ಷ ಶೇ .89.75ರಷ್ಟು ಫಲಿತಾಂಶ ಪಡೆದಿದ್ದ ಮೈಸೂರು ಜಿಲ್ಲೆ ರಾಜ್ಯದಲ್ಲಿ 16ನೇ ಸ್ಥಾನ ಪಡೆದಿತ್ತು. ಈ ಬಾರಿ ಟಾಪ್ 5 ಸ್ಥಾನದೊಳಗೆ ತರಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಶೇ.85ರಷ್ಟಿದ್ದು, ಈಚೆಗೆ ನಡೆದ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇ.91ಕ್ಕೂ ಹೆಚ್ಚು ಫಲಿತಾಂಶ ದಾಖಲಾಗಿದೆ. ಫಲಿತಾಂಶ ಹೆಚ್ಚಳಕ್ಕೆ ಮಕ್ಕಳ ಕಲಿಕೆಗೆ ಕೈಪಿಡಿ ನೀಡಲಾಗಿದ್ದು, ಕಲಿಕಾ ಸಂಪರ್ಕ ಕಾರ್ಯಕ್ರಮವನ್ನೂ ರೂಪಿಸಲಾಗಿತ್ತು. ಇದು ಫಲ ಕೊಡಲಿದೆಯೇ ಇಲ್ಲವೋ ಎಂಬುದು ಫಲಿತಾಂಶದಲ್ಲಿ ತಿಳಿದು ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net