

ಪ್ರಕಾಶ್ ಮಂಜೇಶ್ವರ ಮಂಗಳೂರು
ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ.
ಜೂನ್ 25ರಿಂದ ಜುಲೈ 4 ತನಕ ನಡೆಯಲಿರುವ ಈ ಪರೀಕ್ಷೆಗಳಲ್ಲಿ ದಕ್ಷಿಣ ಕನ್ನಡದ 30,363 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇದರಲ್ಲಿ 15,984 ಗಂಡು ಮತ್ತು 14,379 ಹೆಣ್ಣು ಮಕ್ಕಳು. ದಕ್ಷಿಣ ಕನ್ನಡ ಹೊರಗಿನ ಕರ್ನಾಟಕದ 1,318 ಮಕ್ಕಳು ಅವರ ಜಿಲ್ಲೆಗಳಲ್ಲಿಯೇ ಪರೀಕ್ಷೆಗೆ ಬರೆಯುವ ಅವಕಾಶ ಪಡೆದಿದ್ದಾರೆ. ಉಡುಪಿ ಜಿಲ್ಲೆಯ 14,034 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉಡುಪಿ ಹಾಸ್ಟೆಲ್‌ಗಳಲ್ಲಿದ್ದ ಹೊರಗಿನ ಜಿಲ್ಲೆಯ 506 ವಿದ್ಯಾರ್ಥಿಗಳು ಅವರ ಮಾತೃ ಜಿಲ್ಲೆಗಳಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 95 ಪರೀಕ್ಷಾ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಪರೀಕ್ಷೆ ಮೊದಲು ಮತ್ತು ಬಳಿಕ ಅವುಗಳನ್ನು ಸ್ಯಾನಿಟೈಸ್ ಮಾಡುವ ಜವಾಬ್ದಾರಿಯನ್ನು ಗ್ರಾಪಂ, ನಗರಸಭೆ, ಪುರಸಭೆ, ಮಹಾನರ ಪಾಲಿಕೆಯಂತಹ ಸ್ಥಳೀಯಾಡಳಿತ ಸಂಸ್ಥೆಗಳು ನಿರ್ವಹಿಸಲಿವೆ. ಜ್ವರ, ಶೀತ ಮುಂತಾದ ಆರೋಗ್ಯ ಸಮಸ್ಯೆಗಳಿರುವ ಮಕ್ಕಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪ್ರತೀ ಪರೀಕ್ಷೆ ಕೇಂದ್ರದಲ್ಲಿ ಎರಡು ಹೆಚ್ಚುವರಿ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ತಲಾ ಇಬ್ಬರು ಪೊಲೀಸರು ಹಾಗು ಸ್ಕೌಟ್ ಆ್ಯಂಡ್ ಗೈಡ್ಸ್ ಪ್ರತಿನಿಧಿಗಳು ಇರಲಿದ್ದಾರೆ.
ಗಡಿಯಲ್ಲಿ ಬೇಕಿಲ್ಲ ಪ್ರತ್ಯೇಕ ಪಾಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಸಂಗ ನಡೆಸಿದ ಕಾಸರಗೋಡು ಜಿಲ್ಲೆಯ 367 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂತಾರಾಜ್ಯ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಿದ್ಧ್ದತೆ ನಡೆಸಲಾಗಿದೆ. ಪರೀಕ್ಷೆ ದಿನ ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಕಾಸರಗೋಡಿನ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಪ್ರವೇಶಪತ್ರ ತೋರಿಸಿದರೆ ಸಾಕು. ಪ್ರತ್ಯೇಕ ಪಾಸ್ ಅಗತ್ಯವಿಲ್ಲ. ವಿದ್ಯಾರ್ಥಿಗಳ ಪಾಲಕರಿಗೆ ಪ್ರವೇಶ ಇಲ್ಲ. ಜಿಲ್ಲೆಯ ಖಾಸಗಿ ಶಾಲೆಗಳು ತಮ್ಮದೇ ಶಾಲೆಯ ಬಸ್‌ಗಳನ್ನು ತಲಪಾಡಿ ಗಡಿ ತನಕ ಕಳುಹಿಸಿಕೊಡಲಿದೆ. ಇತರ ಅಗತ್ಯಗಳಿಗೆ ಖಾಸಗಿ ಶಾಲೆಗಳಿಂದ 59 ಬಸ್‌ಗಳನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಪರೀಕ್ಷೆ ನಡೆಯುವ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ತಮ್ಮ ದೈನಂದಿನ ಟ್ರಿಪ್‌ಗಳನ್ನು ಕಡಿತಗೊಳಿಸದಂತೆ ಸೂಚಿಸಲಾಗಿದೆ.
956 ತುಳು ವಿದ್ಯಾರ್ಥಿಗಳು: ತೃತೀಯ ಐಚ್ಛಿಕ ಭಾಷೆಯಾಗಿ ತುಳು ವ್ಯಾಸಂಗ ಮಾಡುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 956 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ. ಪುತ್ತೂರು 346, ಬೆಳ್ತಂಗಡಿ 342, ಮಂಗಳೂರು 63, ಸುಳ್ಯ 66, ಬಂಟ್ವಾಳ 57 ಮತ್ತು 82 ವಿದ್ಯಾರ್ಥಿಗಳಿದ್ದಾರೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸುರಕ್ಷತೆ ಖಾತ್ರಿಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅನ್ಯ ಜಿಲ್ಲೆಗಳ ಕರ್ನಾಟಕದ ವಿದ್ಯಾರ್ಥಿಗಳಿಗೆ ಅವರದೇ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯ ಲು ಅವಕಾಶ ನೀಡಲಾಗಿದೆ. ಮಲ್ಲೇಸ್ವಾಮಿ ಡಿಡಿಪಿಐ, ದ.ಕ