ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ 901 ಶಿಕ್ಷಕರು ಗೈರು

1
Published on

ತುಮಕೂರು: ಕರೊನಾ ಸಂಕಷ್ಟದ ನಡುವೆಯೇ ಯಶಸ್ವಿಯಾಗಿ ಮುಕ್ತಾಯವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜಿಲ್ಲೆಯ 12 ಕೇಂದ್ರಗಳಲ್ಲಿ ಆರಂಭವಾಗಿದ್ದರೂ ಬಹುತೇಕ ಶಿಕ್ಷಕರು ಗೈರಾಗಿರುವುದು ಫಲಿತಾಂಶ ತಡವಾಗುವ ಆತಂಕ ಮೂಡಿಸಿದೆ.

ಮೌಲ್ಯಮಾಪನಕ್ಕೆ ತುಮಕೂರಿನ 2311 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 1324 ಸೇರಿ ಒಟ್ಟು 3635 ಶಿಕ್ಷಕರು ನೋಂದಾಯಿಸಿದ್ದರು. ಆದರೆ ಮೌಲ್ಯಮಾಪನದ ಮೊದಲ ದಿನವಾಗಿದ್ದ ಸೋಮವಾರ ತುಮಕೂರಿನ 1728 ಹಾಗೂ ಮಧುಗಿರಿಯ 1006 ಒಟ್ಟು 2734 ಶಿಕ್ಷಕರು ಹಾಜರಾದರು.

ನಗರದ ಆರ್ಯನ್ ಪ್ರೌಢಶಾಲೆ, ಎಂಪ್ರೆಸ್ ಪ್ರೌಢಶಾಲೆ, ಸೆಂಟ್ ಮೆರೀಸ್ ಪ್ರೌಢಶಾಲೆ, ಸಿದ್ಧಗಂಗಾ ಪ್ರೌಢಶಾಲೆ, ರೇಣುಕಾ ವಿದ್ಯಾಪೀಠ, ಸೋಮೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಮೌಲ್ಯಮಾಪನ ಆರಂಭವಾಯಿತು.

ಮಧುಗಿರಿ ಪಟ್ಟಣದ ಕಾರ್ಡಿಯಲ್ ಆಂಗ್ಲ ಮಾಧ್ಯಮ ಶಾಲೆ, ಚಿರಕ್ ಪಬ್ಲಿಕ್ ಶಾಲೆ, ಚೇತನ ಪ್ರೌಢಶಾಲೆ, ಕೆ.ಆರ್. ಬಡಾವಣೆಯ ಸರ್ಕಾರಿ ಪ್ರೌಢಶಾಲೆ, ಎಂಜಿಎಂ ಪ್ರೌಢಶಾಲೆ, ಜೂಪಿಟರ್ ಪ್ರೌಢಶಾಲೆಯಲ್ಲಿಯೂ ಮೌಲ್ಯಮಾಪನ ಚಟುವಟಿಕೆ ನಡೆಯುತ್ತಿದೆ.

55 ವರ್ಷ ಮೇಲ್ಪಟ್ಟ ಶಿಕ್ಷಕರು ಮೌಲ್ಯಮಾಪನದಿಂದ ದೂರ ಉಳಿಯಲು ಶಿಕ್ಷಣ ಇಲಾಖೆ ವತಿಯಿಂದಲೇ ಅವಕಾಶ ನೀಡಲಾಗಿದೆ ಆದರೆ, ಕರೊನಾ ಭಯದಿಂದ ಸಾವಿರಕ್ಕೂ ಹೆಚ್ಚು ಶಿಕ್ಷಕರು ಮೌಲ್ಯಮಾಪನದಿಂದ ದೂರ ಉಳಿದಿರುವುದು ಹೊಸ ತಲೆನೋವು ತಂದಿದೆ.

ಪ್ರತೀ ಮೌಲ್ಯ ಮಾಪನ ಕೇಂದ್ರದಲ್ಲಿ ಕರೊನಾ ಹಿನ್ನೆಲೆಯಲ್ಲಿ ಒಬ್ಬ ದೈಹಿಕ ಶಿಕ್ಷಕ ಹಾಗೂ ಸ್ಟಾಫ್ ನರ್ಸ್‌ಗಳನ್ನು ನಿಯೋಜಿಸಲಾಗಿದೆ. ದೈಹಿಕ ಅಂತರ ಕಾಯ್ದುಕೊಂಡು ಎಲ್ಲ ಶಿಕ್ಷಕರ ಥರ್ಮಲ್ ಸ್ಕಾೃನಿಂಗ್ ತಪಾಸಣೆ ಮಾಡಿ ಸ್ಯಾನಿಟೈಸ್ ಕೂಡ ಮಾಡಲಾಗುತ್ತಿದೆ.

ಬಸ್ ಕಳುಹಿಸಿದರೂ ಶಿಕ್ಷಕರಿಗೆ ಮನಸ್ಸಿಲ್ಲ!: ಮೌಲ್ಯ ಮಾಪನ ಕೇಂದ್ರಕ್ಕೆ ಹಾಜರಾಗಲು ಅನುವಾಗುವಂತೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗಾಗಿ ತಿಪಟೂರು ಹಾಗೂ ತುರುವೇಕೆರೆ ತಾಲೂಕಿನಿಂದ ತಲಾ 8, ಕುಣಿಗಲ್‌ನಿಂದ 5, ಚಿಕ್ಕನಾಯಕನಹಳ್ಳಿ ಹಾಗೂ ಕೊರಟಗೆರೆಯಿಂದ ತಲಾ 3, ಪಾವಗಡ ಹಾಗೂ ಶಿರಾ ತಾಲೂಕಿನಿಂದ ತಲಾ 10 ಸೇರಿದಂತೆ ಒಟ್ಟು 47 ಖಾಸಗಿ ಶಾಲೆಗಳ ಬಸ್ ವ್ಯವಸ್ಥೆ ಮಾಡಲಾಗಿದೆ. ಮೌಲ್ಯಮಾಪನ ಕೇಂದ್ರದಲ್ಲಿ ಕರೊನಾ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದರೂ ಶಿಕ್ಷಕರಿಗೆ ಭಯ ದೂರವಾಗಿಲ್ಲ.

ಸರ್ಕಾರದ ಮಾರ್ಗಸೂಚಿಯಂತೆ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ನೋಂದಾಯಿಸಿದ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕು. ಸಕಾರಣವಿಲ್ಲದೇ ಗೈರಾದವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯವಾಗಲಿದೆ. ಎಂ.ರೇವಣಸಿದ್ಧಪ್ಪ ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net