

ಹೂವಿನಹಡಗಲಿ: ತಾಲೂಕಿನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ 9 ಪರೀಕ್ಷಾ ಕೆಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದ್ದು ಎಲ್ಲ ಸಿಬ್ಬಂದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಿಇಒ ಮಹೇಶ್ ಪೂಜಾರ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಮುಖ್ಯ ಅಧೀಕ್ಷಕರ ಕಸ್ಟೋಡಿಯನ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಪರೀಕ್ಷಾ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡಲು ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಶಾಲೆಯ ಎಲ್ಲ ಶೌಚಗೃಹಗಳನ್ನು ಸ್ವಚ್ಛವಾಗಿರಿಸಬೇಕು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಆಯಾ ದಿನದ ಹಾಜರಾತಿ ಆನ್‌ಲೈನ್‌ನಲ್ಲಿ ನೀಡಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಹಾಗೂ ಇತರರು ಮಾತನಾಡಿದರು. ಎಸ್ಸೆಸ್ಸೆಲ್ಸಿ ತಾಲೂಕು ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ, ತಾಲೂಕು ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಕಾಂತೇಶ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಮುಖ್ಯಶಿಕ್ಷಕ ಸುರೇಶ ಅಂಗಡಿ ಹಾಗೂ ಇತರರಿದ್ದರು.