ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್ಬಲನ ತರಗತಿ ದಿನಾಂಕ ಮುಂದೂಡಿಕೆಗೆ ಆಗ್ರಹ

sslc, class, adjournment, demand
Published on

ಹರಿಹರ: ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ಮೇ 15ರ ಬದಲು 29ರಿಂದ ಆರಂಭಿಸುವಂತೆ ಆಗ್ರಹಿಸಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದವರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ಈಶಪ್ಪ ಬೂದಿಹಾಳ್ ಮಾತನಾಡಿ, ಪುನರ್ಬಲನ ತರಗತಿ ತೆಗೆದುಕೊಳ್ಳಲು ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿರುವುದು ಸಹಶಿಕ್ಷಕರ ತೀವ್ರ ಅಸಮಾಧಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ಸಹಶಿಕ್ಷಕರು ರಜಾ ಅವಧಿಯಲ್ಲೂ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಚುನಾವಣಾ ಕರ್ತವ್ಯಗಳು ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೆ, ಶೈಕ್ಷಣಿಕ ಅವಧಿಯಲ್ಲೂ ಪಾಠಬೋಧನೆ ಪರೀಕ್ಷೆ, ನಿತ್ಯವೂ ವಿಶೇಷ ತರಗತಿ, ಗುಂಪು ಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು. ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸುವುದು, ಮಕ್ಕಳ ಮನೆ ಭೇಟಿ, ವಿವಿಧ ಸಭೆಗಳು, ವಿಷಯವಾರು ತಜ್ಞರಿಂದ ತರಬೇತಿ ಕೈಗೊಂಡಿರುತ್ತಾರೆ ಎಂದು ವಿವರಿಸಿದರು.

ವಿದ್ಯಾಥಿಗಳು ಉತ್ತೀರ್ಣರಾಗಲು ಸಹಶಿಕ್ಷಕರು ಪ್ರಯತ್ನಿಸಿದರೂ ಶಿಕ್ಷಕರ ಮೇಲೆ ಗೌರವ, ಮಾನವೀಯತೆ ಇಲ್ಲ ಎಂಬುದು ಈ ಆದೇಶದಿಂದ ತೋರುತ್ತದೆ. ಶಿಕ್ಷಕರ ಹೃದಯ ಕದಡುತ್ತಿದ್ದು, ಸ್ವಯಂನಿವೃತ್ತಿಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.

ನಿರಂತರ ಮಾನಸಿಕ ಒತ್ತಡದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಇಒ, ಡಿಡಿಪಿಐ ಮೂಲಕ ಶಿಕ್ಷಕರನ್ನು ರಜಾ ಅವಧಿಯಲ್ಲೂ ಒತ್ತಾಯಪೂರ್ವಕವಾಗಿ ಕರ್ತವ್ಯಕ್ಕೆ ಹಾಜರಾಗಲೂ ಹೇಳುತ್ತಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಮೇ 15ರ ಬದಲು 29ರಿಂದ ಜೂನ್ 6ರ ವರೆಗೆ 10 ದಿನಗಳ ಅವಧಿಗೆ ತರಗತಿ ಆಯೋಜಿಸಬೇಕು ಮತ್ತು ಶಿಕ್ಷಣ ಇಲಾಖೆಯನ್ನು ರಜಾ ರಹಿತ ಇಲಾಖೆ ಎಂದು ಘೋಷಿಸುವಂತೆ ಒತ್ತಾಯಿಸಿದರು.

ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಡಿ. ಧನ್ಯಕುಮಾರ್, ರಾಜ್ಯ ಪರಿಷತ್ ಸದಸ್ಯ ಡಿ.ಎಂ. ಮಂಜುನಾಥಯ್ಯ, ಜಿಲ್ಲಾ ಪ್ರತಿನಿಧಿ ಎಂ.ಇ. ಲಿಂಗರಾಜ್, ಮುಖ್ಯಶಿಕ್ಷಕರ ಸಂಘದ ಬಿ. ರೇವಣನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net