ಎಸ್‌ಎಸ್‌ಎಲ್‌ಸಿ ಬೇಸ್‌ಲೈನ್ ಪರೀಕ್ಷೆ

28 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಆಯೋಜಿಸಿರುವ ಮಿಷನ್ ವಿದ್ಯಾಕಾಶಿ ಯೋಜನೆಯಡಿ ಜಿಲ್ಲೆಯಾದ್ಯಂತ ಬುಧವಾರ ಬೋರ್ಡ್ ಪರೀಕ್ಷೆ ಮಾದರಿಯಲ್ಲಿ ಬೇಸ್‌ಲೈನ್ ಪರೀಕ್ಷೆ ಆಯೋಜಿಸಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನಗರದ ನವಲೂರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ಪರಿಶೀಲಿಸಿದರು. ಪರೀಕ್ಷೆ, ಪ್ರಶ್ನೆಪತ್ರಿಕೆ ಸ್ವರೂಪದ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದರು.
ಈ ವೇಳೆ ಸಂತೋಷ ಲಾಡ್ ಮಾತನಾಡಿ, 10ನೇ ತರಗತಿಯ ಪಠ್ಯಕ್ರಮದಲ್ಲಿ ಕೌಶಲ್ಯಭರಿತ ತರಬೇತಿ ನೀಡುವ ಮತ್ತು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಂಶಗಳು ಸೇರಬೇಕು. ಶಿಕ್ಷಣದ ನಂತರ ವಿದ್ಯಾರ್ಥಿ ಸ್ವಾವಲಂಬಿ ಆಗುವಂತೆ ರೂಪಿಸುವ ಶಿಕ್ಷಣ ಬೇಕು. ಶೈಕ್ಷಣಿಕ ವಲಯದ ಸಮಗ್ರ ಬದಲಾವಣೆಗೆ ಇಂಥ ಕ್ರಮಗಳ ಅಗತ್ಯವಿದೆ ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ಬೋರ್ಡ್ ಮಾದರಿಯ ಬೇಸ್‌ಲೈನ್ ಪರೀಕ್ಷೆಯನ್ನು ಜಿಲ್ಲೆಯ 466 ಪ್ರೌಢಶಾಲೆಗಳ 1,262 ಬ್ಲಾಕ್‌ಗಳಲ್ಲಿ ಏಕಕಾಲಕ್ಕೆ ಆಯೋಜಿಸಲಾಗಿದೆ. 27,625 ವಿದ್ಯಾರ್ಥಿಗಳ ಪೈಕಿ 2,456 ಜನ ಗೈರಾಗಿದ್ದಾರೆ. ಅಂಥ ವಿದ್ಯಾರ್ಥಿಗಳ ಮನೆ ಭೇಟಿ, ಪಾಲಕರ ಸಭೆ ಆಯೋಜಿಸಲಾಗುವುದು ಎಂದರು.
ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಾಲಂ ಹುಸೇನ್, ತಹಸೀಲ್ದಾರ್ ಡಿ.ಎಚ್. ಹೂಗಾರ, ಮಿಷನ್ ವಿದ್ಯಾಕಾಶಿ ಶೈಕ್ಷಣಿಕ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎಂ. ಶಿವಪ್ರಸಾದ, ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಽಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net