ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ; ಜಿಲ್ಲೆಯ 220 ಪರೀಕ್ಷಾ ಕೇಂದ್ರಗಳಲ್ಲಿ 34679 ವಿದ್ಯಾರ್ಥಿಗಳಿಗೆ ಪರೀಕ್ಷೆ

sslc
Published on

ಮಧುಗಿರಿ : 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಜು.19 ಮತ್ತು 22ರಂದು ನಡೆಯಲಿದ್ದು, ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ ಒಟ್ಟು 220 ಪರೀಕ್ಷಾ ಕೇಂದ್ರಗಳಲ್ಲಿ 34679 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕರೊನಾ ಮಾರ್ಗಸೂಚಿಯೊಂದಿಗೆ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ತುಮಕೂರು ತಾಲೂಕಿನಲ್ಲಿ ಒಟ್ಟು 53 ಪರೀಕ್ಷಾ ಕೇಂದ್ರಗಳಲ್ಲಿ 10083 ವಿದ್ಯಾರ್ಥಿಗಳು, ಕುಣಿಗಲ್ ತಾಲೂಕಿನಲ್ಲಿ 17 ಪರೀಕ್ಷಾ ಕೇಂದ್ರಗಳಲ್ಲಿ 2856 ವಿದ್ಯಾರ್ಥಿಗಳು, ತಿಪಟೂರು ತಾಲೂಕಿನಲ್ಲಿ 14 ಪರೀಕ್ಷಾ ಕೇಂದ್ರಗಳಲ್ಲಿ 2866 ವಿದ್ಯಾರ್ಥಿಗಳು, ಗುಬ್ಬಿ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಲ್ಲಿ 3293 ವಿದ್ಯಾರ್ಥಿಗಳು, ತುರುವೇಕೆರೆ ತಾಲೂಕಿನಲ್ಲಿ 15 ಪರೀಕ್ಷಾ ಕೇಂದ್ರಗಳಿಂದ 2037 ವಿದ್ಯಾರ್ಥಿಗಳು, ಮಧುಗಿರಿ ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಲ್ಲಿ 3391 ವಿದ್ಯಾರ್ಥಿಗಳು, ಪಾವಗಡ ತಾಲೂಕಿನಲ್ಲಿ 19 ಪರೀಕ್ಷಾ ಕೇಂದ್ರಗಳಿಂದ 2911 ವಿದ್ಯಾರ್ಥಿಗಳು, ಕೊರಟಗೆರೆ ತಾಲೂಕಿನಲ್ಲಿ 16 ಪರೀಕ್ಷಾ ಕೇಂದ್ರಗಳಲ್ಲಿ 2295 ವಿದ್ಯಾರ್ಥಿಗಳು, ಶಿರಾ ತಾಲೂಕಿನಲ್ಲಿ 24 ಪರೀಕ್ಷಾ ಕೇಂದ್ರಗಳಲ್ಲಿ 4389 ವಿದ್ಯಾರ್ಥಿಗಳು ನೂತನ ಪದ್ಧತಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಎರಡೂ ಶೈಕ್ಷಣಿಕ ಜಿಲ್ಲೆಗಳಿಂದ 5448 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1905 ಸಿಬ್ಬಂದಿ ಮೊದಲ ಡೋಸ್, 710 ಸಿಬ್ಬಂದಿ 2ನೇ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದು, ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲೂ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದ ಸಿಬ್ಬಂದಿಯನ್ನೇ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

ಹೇಗಿರಲಿದೆ ಪರೀಕ್ಷೆ: ನೂತನ ಪರೀಕ್ಷಾ ಪದ್ಧತಿಯಲ್ಲಿ ಒಟ್ಟು 6 ವಿಷಯಗಳಿಗೆ ಸಂಬಂಧಿಸಿದಂತೆ 2 ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ಪತ್ರಿಕೆ 1ರಲ್ಲಿ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಒಟ್ಟು 120 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರಶ್ನೆ ಪತ್ರಿಕೆ 2ರಲ್ಲಿ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಪ್ರತೀ ವಿಷಯವು 40 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿದ್ದು, ನೇರ, ಸಂಕ್ಷಿಪ್ತ ಹಾಗೂ ಸರಳವಾಗಿರುತ್ತವೆ.

ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಗಳಾಗಿರುವುದರಿಂದ ಉತ್ತರ ಪತ್ರಿಕೆಯು ಓ.ಎಂ.ಆರ್ ರೂಪದಲ್ಲಿರುತ್ತದೆ. ಈ ಎರಡೂ ಪ್ರಶ್ನೆ ಪತ್ರಿಕೆಗಳಿಗೆ 3 ಗಂಟೆ ಸಮಯ ನಿಗದಿ ಮಾಡಲಾಗಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ. ಜು.19ರಂದು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆ ನಡೆಯಲಿದ್ದು, ಜು.22ರಂದು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಸಂಬಂಧಿಸಿದ ಪರೀಕ್ಷೆ ನಡೆಯಲಿದೆ. ಅಂಕಗಳನ್ನು ಎ+, ಎ, ಬಿ, ಸಿ ಗ್ರೇಡ್‌ಗಳಂತೆ ವರ್ಗೀಕರಿಸಲಾಗಿದ್ದು, 90-100 ಅಂಕಗಳಿಗೆ ಎ+ ಗ್ರೇಡ್, 80-89 ಅಂಕಗಳಿಗೆ ಎ ಗ್ರೇಡ್, 60-69 ಬಿ ಗ್ರೇಡ್ ಮತ್ತು 35-59 ಅಂಕಗಳಿಗೆ ಸಿ ಗ್ರೇಡ್ ನೀಡಲಾಗುತ್ತದೆ.

ಪ್ರತಿ ಕೊಠಡಿಯಲ್ಲಿ 10 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೀಮಿತಗೊಳಿಸಿದ್ದು, ಕರೊನಾ ಹಿನ್ನೆಲೆಯಲ್ಲಿ ಪ್ರತಿ ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಗೆ ಸ್ಥಳಾವಕಾಶ ನೀಡಲಾಗಿದೆ. ಡೆಸ್ಕ್‌ನಲ್ಲಿ ವಿದ್ಯಾರ್ಥಿಗಳು ಜಿಗ್‌ಜಾಗ್ ಮಾದರಿಯಲ್ಲಿ ಕುಳಿತುಕೊಂಡು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಎಂ.ರೇವಣಸಿದ್ದಪ್ಪ, ಡಿಡಿಪಿಐ ಮಧುಗಿರಿ ಶೈಕ್ಷಣಿಕ ಜಿಲ್ಲೆ ಪರೀಕ್ಷೆಗೂ ಮುಂಚೆಯೇ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಗ್ರಾಪಂ, ಪುರಸಭೆ, ನಗರಸಭೆ ಅಧಿಕಾರಿಗಳಿಗೆ ವಿನಂತಿಸಲಾಗಿದ್ದು, ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕುಡಿಯುವ ನೀರನ್ನು ಮನೆಯಿಂದಲೇ ತರಲು ಸೂಚಿಸಲಾಗಿದೆ. ಅಗತ್ಯವಿದ್ದರೆ ಶುದ್ಧ ನೀರು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿ.ನಂಜಯ್ಯ ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net