ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯವೂ ಸುಗಮ

3-klr-9
Published on

ಕೋಲಾರ: ಕರೊನಾ ಆತಂಕದ ಸವಾಲನ್ನು ಮೆಟ್ಟಿನಿಂತು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ಹೇಳಿದರು.

ಪರೀಕ್ಷೆಯ ಕಡೇ ದಿನವಾದ ಶುಕ್ರವಾರ ನಗರದ ನೂತನ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದರೂ ಎದುರಾಗಿದ್ದ ಆತಂಕವನ್ನು ಯಶಸ್ವಿಯಾಗಿ ನಿಭಾಯಿಸಿ ಮೊದಲ ದಿನ ಕೋವಿಡ್ ಮಾರ್ಗಸೂಚಿ ಪಾಲಿಸಿದಷ್ಟೇ ಉತ್ಸಾಹದಿಂದ ಕೊನೇ ದಿನದ ಪರೀಕ್ಷೆಯಲ್ಲೂ ನಿಯಮ ಪಾಲಿಸಲಾಗಿತ್ತು ಎಂದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ದರ್ಶನ್, ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ನೀಡಿದ ಸಹಕಾರ, ಪೊಲೀಸ್ ಇಲಾಖೆ ನೀಡಿದ ಭದ್ರತೆ, ಆರೋಗ್ಯ ಇಲಾಖೆ ಸೋಂಕು ಹರಡದಂತೆ ವಹಿಸಿದ ಮುಂಜಾಗ್ರತೆ, ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಕೆಎಸ್‌ಆರ್‌ಟಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರು.

ಪರೀಕ್ಷೆ ಯಶಸ್ವಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ, ಬಿಇಒ, ನೋಡಲ್ ಅಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು, ಇಲಾಖೆಯ ಎಲ್ಲ ವರ್ಗಗಳ ಸಿಬ್ಬಂದಿ ಮುನ್ನಚ್ಚರಿಕಾ ಕ್ರಮ ಪಾಲಿಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸಿಸಿದರು.

ಯಶ ಸಾಧಿಸಲು ಮಕ್ಕಳಿಗೆ ಅಗತ್ಯವಾದ ಮಾಸ್ಕ್, ಸ್ಯಾನಿಟೈಸರ್, ಮಾರ್ಗದರ್ಶನ ನೀಡಿದ ರೋಟರಿ, ರೆಡ್‌ಕ್ರಾಸ್ ಸಂಸ್ಥೆಗಳು, ಪರೀಕ್ಷೆಯ ಎಲ್ಲ ದಿನಗಳೂ ಕೇಂದ್ರಗಳಲ್ಲಿ ಹಾಜರಿದ್ದು ಸ್ವಯಂ ಸೇವಕರಂತೆ ಕಾರ್ಯನಿರ್ವಹಿಸಿದ ಸ್ಕೌಟ್ಸ್-ಗೈಡ್ಸ್ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು.

ಹಿಂದಿ ಪರೀಕ್ಷೆಗೆ 666 ಮಂದಿ ಗೈರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೇ ದಿನವಾದ ಶುಕ್ರವಾರ ನಡೆದ ಹಿಂದಿ ಪರೀಕ್ಷೆಗೆ ಒಟ್ಟು 666 ಮಂದಿ ಗೈರಾಗಿದ್ದರು. ಜಿಲ್ಲೆಯ 70 ಪರೀಕ್ಷಾ ಕೇಂದ್ರಗಳಲ್ಲಿ ಹಿಂದಿ ಪರೀಕ್ಷೆಗೆ ಒಟ್ಟು ಒಟ್ಟು 20282 ಮಂದಿ ನೋಂದಾಯಿಸಿದ್ದು, 19616 ಮಂದಿ ಹಾಜರಾಗಿದ್ದಾರೆ. ಕಟೇನ್ಮೆಂಟ್ ವಲಯಗಳಿಂದ ಬಂದು 176 ಮಕ್ಕಳು ಪರೀಕ್ಷೆ ಬರೆದರೆ, ಅನಾರೋಗ್ಯದ ಕಾರಣದಿಂದ ಇಬ್ಬರು ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. ನೆರೆ ರಾಜ್ಯಗಳಿಂದ 19 ಮಂದಿ ಹಾಗೂ ವಲಸೆ ವಿದ್ಯಾರ್ಥಿಗಳು 144 ಮಂದಿ ಪರೀಕ್ಷೆ ಬರೆದರು.

ಹಾಜರಿ ವಿವರ: ಬಂಗಾರಪೇಟೆ-ನೋಂದಾಯಿಸಿದ 3252 ಮಕ್ಕಳಲ್ಲಿ 3152 ಮಂದಿ ಹಾಜರಾಗಿ 100 ಮಂದಿ ಗೈರಾಗಿದ್ದರು. ಕೆಜಿಎಫ್-2628 ಮಂದಿ ನೋಂದಾಯಿಸಿ 2550 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 78 ಮಂದಿ ಗೈರಾಗಿದ್ದರು. ಕೋಲಾರ-ಪರೀಕ್ಷೆ ತೆಗೆದುಕೊಂಡಿದ್ದ 5343 ಮಕ್ಕಳ ಪೈಕಿ 5138 ಮಂದಿ ಹಾಜರಾಗಿ 205 ಮಂದಿ ಗೈರಾಗಿದ್ದರು. ಮಾಲೂರು- 3019 ಮಂದಿ ನೋಂದಾಯಿಸಿದ್ದು, 2884 ಮಂದಿ ಹಾಜರಾಗಿ 135 ಮಂದಿ ಗೈರಾಗಿದ್ದರು.ಮುಳಬಾಗಿಲಲ್ಲಿ 3213 ಮಂದಿ ನೋಂದಾಯಿಸಿದ್ದು, 3125 ಮಂದಿ ಹಾಜರಾಗಿ 88 ಮಂದಿ ಗೈರಾದರು. ಶ್ರೀನಿವಾಸಪುರದಲ್ಲಿ ನೋಂದಾಯಿಸಿದ 2827 ಮಕ್ಕಳಲ್ಲಿ 2767 ಮಂದಿ ಹಾಜರಾಗಿ 60 ಮಂದಿ ಗೈರಾಗಿದ್ದರು.

ಮಕ್ಕಳಿಗೆ 25 ಸಾವಿರ ಮಾಸ್ಕ್

ಕೋಲಾರ: ಜಿಲ್ಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ 25,000 ಮಾಸ್ಕ್ ನೀಡಲು ದಾನಿಗಳು ಸಂಪೂರ್ಣ ಸಹಕಾರ ನೀಡಿದ್ದು, 70 ಪರೀಕ್ಷಾ ಕೇಂದ್ರಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ 340 ಮಂದಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಪದಾಧಿಕಾರಿಗಳ ಕಾರ್ಯಕ್ಕೆ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ. ಶಂಕರಪ್ಪ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net