

ಕೋಲಾರ: ಕರೊನಾ ಹೆಮ್ಮಾರಿಗೆ ಸೆಡ್ಡು ಹೊಡೆದು ಗುರುವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾದ್ಯಂತ ಗೊಂದಲಕ್ಕೆ ಆಸ್ಪದವಿಲ್ಲದೆ ನಡೆದಿದ್ದು, ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ವಿಷಯಕ್ಕೆ 678 ವಿದ್ಯಾರ್ಥಿಗಳು ಗೈರಾಗಿದ್ದರು.
ಜಿಲ್ಲೆಯ 70 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಪರೀಕ್ಷೆಗೆ ಒಟ್ಟು 20387 ವಿದ್ಯಾರ್ಥಿಗಳು ನೋಂದಾಯಿಸಿದ್ದು, 19709 ವಿದ್ಯಾರ್ಥಿಗಳು ಹಾಜರಾದರೆ, 678 ಮಂದಿ ಗೈರಾದರು. ಕಂಟೇನ್ಮೆಂಟ್ ಪ್ರದೇಶದಿಂದ ಬಂದ 99 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ನೆರೆ ರಾಜ್ಯಗಳಿಂದ ಬಂದ 19 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಡಿಡಿಪಿಐ ಕೆ. ರತ್ನಯ್ಯ ತಿಳಿಸಿದ್ದಾರೆ.
ಪರಸ್ಪರ ಅಂತರ ಕಾಯ್ದುಕೊಳ್ಳಲು ಮತ್ತು ಗುಂಪು ಸೇರುವುದನ್ನು ತಡೆಯಲು ಬೆಳಗ್ಗೆ 10.30ಕ್ಕೆ ಆರಂಭಗೊಂಡ ಪರೀಕ್ಷೆಗೆ ಬೆಳಗ್ಗೆ 7.30ರಿಂದಲೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು.
ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಹಾಕಿ, ಮಾಸ್ಕ್ ಕೊಟ್ಟು ಧ್ವನಿವರ್ಧಕಗಳ ಮೂಲಕ ಮಾರ್ಗದರ್ಶನ ನೀಡಿ ಕೊಠಡಿಯಲ್ಲಿ ಕುಳಿತು ಓದುವಂತೆ ಕಳುಹಿಸಿಕೊಟ್ಟರು. ಶಾಲೆ ಮುಂಭಾಗ ಪರಸ್ಪರ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಹಾಕಲಾಗಿತ್ತು. ಮಕ್ಕಳಿಗೆ ಸ್ವಾಗತ ಕೋರಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಒಳ ಪ್ರವೇಶ ನೀಡಲಾಯಿತು.
ಸಿಬ್ಬಂದಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದ್ದು, ಕೈಗಳಿಗೆ ಗ್ಲೌಸ್ ಧರಿಸಿಯೇ ಪರೀಕ್ಷಾ ಕಾರ್ಯ ನಿರ್ವಹಿಸಿದರು. ಪರೀಕ್ಷೆ ಮುಗಿಸಿ ಹೋಗುವಾಗ ಮಕ್ಕಳು ದೈಹಿಕ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆ ವಹಿಸಿ ಒಂದೊಂದೇ ಕೊಠಡಿಗೆ ಮಕ್ಕಳನ್ನು ಕಳುಹಿಸಲಾಯಿತು.
ನಗರದ ಚಿನ್ಮಯ, ಮಹಿಳಾ ಸಮಾಜ, ಸೆಂಟ್ ಆನ್ಸ್, ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜು ಕೇಂದ್ರಗಳಿಗೆ ಡಿಸಿ ಸಿ.ಸತ್ಯಭಾಮ ಭೇಟಿ ನೀಡಿ ಪರಿಶೀಲಿಸಿದರೆ, ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಾಹಿತಿ ಕೊರತೆ: ಬಂಗಾರಪೇಟೆ ತಾಲೂಕಿನಾದ್ಯಂತ 29 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಮಾಹಿತಿ ಕೊರತೆಯಿಂದ ಮಕ್ಕಳನ್ನು ಪಾಲಕರೇ ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬಂದರು. ಬಹುತೇಕ ಕಡೆ ಬಸ್‌ಗಳು ಖಾಲಿಯಾಗಿ ಓಡಾಡಿದವು.
ನಿರ್ದೇಶಕ ಕರಿ ಚನ್ನಣ್ಣನವರ್ ಭೇಟಿ: ಜಿಲ್ಲೆಯ ನರಸಾಪುರ, ವೇಮಗಲ್, ಕ್ಯಾಲನೂರು ಸೇರಿ ಕೆಲ ಕೇಂದ್ರಗಳಿಗೆ ಭೇಟಿ ನೀಡಿದ್ದ ರಾಜ್ಯ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕ ಕರಿ ಚನ್ನಣ್ಣನವರ್, ಕೋವಿಡ್ ಮಾರ್ಗಸೂಚಿ ಅನುಸರಿಸಿ ಕೈಗೊಂಡಿರುವ ಸಿದ್ಧತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ಪ್ರವೇಶಪತ್ರದೊಂದಿಗೆ ಕೊಠಡಿ ಸಂಖ್ಯೆ ನೀಡಿ ಗುಂಪು ಸೇರಲು ಅವಕಾಶ ನೀಡದೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.
ಖುಷಿಯಾಗಿ ಪರೀಕ್ಷೆ ಬರೆಯಿರಿ: ‘ಮಕ್ಕಳೇ...ಪರೀಕ್ಷೆ ನಡೆಯುತ್ತಿರುವುದು ಖುಷಿಯಾಗಿದ್ಯಾ...ಎಲ್ಲರೂ ಖುಷಿಯಾಗಿಯೇ ಪರೀಕ್ಷೆ ಬರೆಯಿರಿ, ಆಲ್‌ದಿ ಬೆಸ್ಟ್ ’ ಹೀಗೆಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಪರೀಕ್ಷಾರ್ಥಿಗಳನ್ನು ಹುರಿದುಂಬಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಗರದ ಮಹಿಳಾ ಸಮಾಜ ಹಾಗೂ ಚಿನ್ಮಯ ವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಬರೆಯಲು ಸಜ್ಜಾಗಿದ್ದ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ನಡೆಯುತ್ತಿರುವುದು ಖುಷಿ ಆಗಿದ್ಯಾ...ಭಯ ಆಗ್ತಿದೆಯೇ’ ಎಂದು ಪ್ರಶ್ನಿಸಿದಾಗ ಖುಷಿ ಆಗ್ತಿದೆ ಎಂಬ ಉತ್ತರ ಬಂತು.
ಎಸ್ಸೆಸ್ಸೆಲ್ಸಿ ಜೀವನದ ಟರ್ನಿಂಗ್ ಪಾಯಿಂಟ್, ಹಾಗೆಯೇ ಪಾಸ್ ಮಾಡುವ ಬದಲು ಪರೀಕ್ಷೆಯಲ್ಲಿ ನಮ್ಮ ಸಾಮರ್ಥ್ಯ ತೋರಿಸಿ ಉತ್ತಮ ಅಂಕ ಗಳಿಸಿದರೆ ಅದರಷ್ಟು ಖುಷಿ ಬೇರೆ ಇಲ್ಲ. ಕೂಲಾಗಿ ಪರೀಕ್ಷೆ ಬರೆಯಿರಿ ಎಂದು ಧೈರ್ಯ ತುಂಬಿದರು.
ಗೊಂದಲವಿಲ್ಲದೆ ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯುತ್ತಿದೆ, ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದ ಎಲ್ಲ ದಿನಗಳಲ್ಲೂ ಇದೇ ರೀತಿ ಚೆನ್ನಾಗಿ ಪರೀಕ್ಷೆ ನಡೆಯುತ್ತದೆ ಎಂಬ ವಿಶ್ವಾಸವಿದೆ. ಸಿ. ಸತ್ಯಭಾಮ, ಜಿಲ್ಲಾಧಿಕಾರಿ, ಕೋಲಾರ