

ಬೇತಮಂಗಲ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಬುಧವಾರ ಕರೊನಾ ದೃಢಪಟ್ಟಿದ್ದರಿಂದ ಆಕೆಯನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪೂರಕ ಪರೀಕ್ಷೆ ಅವಕಾಶ ಕಲ್ಪಿಸಲಾಗಿದೆ.
ಬಾಲ್ಯವಿವಾಹವಾದ ಆರೋಪದಡಿ ವಾರದ ಹಿಂದೆ ಆಕೆಯನ್ನು ಕೆಜಿಎಫ್ ಬಾಲಮಂದಿರದಲ್ಲಿ ಇರಿಸಲಾಗಿತ್ತು. ಜೂ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುತ್ತಿರುವುದರಿಂದ ಪರೀಕ್ಷೆ ಬರೆಯಲು ಕಳುಹಿಸಿಕೊಡುವಂತೆ ಪಾಲಕರು ಬಾಲಮಂದಿರದ ಅಧಿಕಾರಿಗಳ ಬಳಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕಳುಹಿಸಿದ್ದರು.
ಬಾಲಕಿ ಗುರುವಾರ ಬೆಳಗ್ಗೆ ಸುಂದರಪಾಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪರೀಕ್ಷೆ ಬರೆಯಲು ಹೋಗಬೇಕಿತ್ತು. ಆದರೆ ಬುಧವಾರ ಬಾಲಕಿಗೆ ಸೋಂಕು ಧೃಡಪಟ್ಟಿದೆ. ಬೇತಮಂಗಲ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಗೆ ಆಂಧ್ರ ಮೂಲದ 22 ವರ್ಷದ ಸುರೇಶ್ ಜತೆ ಜೂ.15ರಂದು ತಾತೇನಹಳ್ಳಿಯ ದೇವಾಲಯವೊಂದರಲ್ಲಿ ಮದುವೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನಮ್ಮ, ಮಹಿಳಾ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಡಾ.ಗೋಪಾಲ್, ಆಪ್ತಸಮಾಲೋಚಕಿ ಪವಿತ್ರಾ ಇತರರು ಬಾಲ್ಯವಿವಾಹ ಖಚಿತಪಡಿಸಿಕೊಂಡು ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಬಾಲಕಿ ವಿಚಾರಣೆ ನಂತರ ವೈದ್ಯಕೀಯ ಪರೀಕ್ಷೆ ಮತ್ತು ಕೋವಿಡ್-19 ಪರೀಕ್ಷೆ ನಡೆಸಿ 4 ದಿನಗಳ ಹಿಂದೆ ಕೆಜಿಎಫ್ ಬಾಲಮಂದಿರಕ್ಕೆ ಕಳುಹಿಸಿದ್ದರು. ಬುಧವಾರದ ವರದಿಯಲ್ಲಿ ಕರೊನಾ ದೃಢಪಟ್ಟಿದೆ.
ಪೊಲೀಸ್ ಸಿಬ್ಬಂದಿಗೂ ಆತಂಕ: ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆಯಡಿ ಸಂಬಂಧಪಟ್ಟಂತೆ ವಿಚಾರಣೆಗಾಗಿ 2 ದಿನ ಬಾಲಕಿ ಬೇತಮಂಗಲ ಠಾಣೆಗೆ ಹಾಜರಾಗಿದ್ದಳು. ಈ ಸಂದರ್ಭದಲ್ಲಿ ಕೆಜಿಎಫ್ ಜಿಲ್ಲಾ ಉಪವರಿಷ್ಠಾಧಿಕಾರಿ ಉಮೇಶ್ ಸೇರಿ ಮಹಿಳಾ ಪಿಎಸ್‌ಐ, ಎಸ್‌ಐ, ಸಿಡಿಪಿಒ ಇತರರು ವಿಚಾರಣೆ ನಡೆಸಿದ ನಂತರ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಇದೀಗ ಸೋಂಕು ದೃಢಪಟ್ಟಿರುವುದರಿಂದ ಬೇತಮಂಗಲ ಠಾಣೆ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ.
ಸಂಚಾರಿ ಠಾಣೆ ಸೀಲ್ ಡೌನ್: ಕೋಲಾರ: ನಗರದ ಸಂಚಾರಿ ಠಾಣೆಯ ಮುಖ್ಯಪೇದೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸೇರಿ ಜಿಲ್ಲೆಯಲ್ಲಿ ಒಟ್ಟು 6 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 80ಕ್ಕೆ ಏರಿದೆ.
ಸಂಚಾರಿ ಠಾಣೆ ಪೇದೆ ಜ್ವರದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಸಿಬ್ಬಂದಿಯನ್ನು ನಗರಠಾಣೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಪೇದೆ ಗಲ್‌ಪೇಟೆ ಠಾಣೆ ಬಳಿಯ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪತ್ನಿ ಸೇರಿ ಐವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ನಗರದಲ್ಲಿ ಇನ್ನಿಬ್ಬರಿಗೂ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಂಬಾರಬೀದಿ ಸುತ್ತಮುತ್ತಲ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶವಾಗಿ ಘೋಷಿಸಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 44 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 33 ಮಂದಿ ಸೇರಿ ಒಟ್ಟು 73 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು ಪ್ರಸ್ತುತ ನಿಗಾದಲ್ಲಿರುವವರ ಸಂಖ್ಯೆ1345ಕ್ಕೆ ಏರಿದೆ.