

ಕೋಲಾರ: ಜಿಲ್ಲೆಯಾದ್ಯಂತ ಎಲ್ಲ 70 ಪರೀಕ್ಷಾ ಕೇಂದ್ರಗಳನ್ನು ಕರೊನಾ ಸೋಕುಮುಕ್ತ, ಸುರಕ್ಷಾ ಕೇಂದ್ರವನ್ನಾಗಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸೂಚಿಸಿದರು.
ಜೂ. 25ರಿಂದ ಆರಂಭಗೊಳ್ಳುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಬಂಧ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಿ ಪರೀಕ್ಷೆ ಯಶಸ್ವಿಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.
ಆಂಧ್ರಪ್ರದೇಶ, ಮಹಾರಾಷ್ಟ್ರ ಇನ್ನಿತರ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಪಡಿಸಿವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ತಿರುವಿನ ಘಟ್ಟವಾದ್ದರಿಂದ ರಾಜ್ಯ ಸರ್ಕಾರ ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿದೆ. ಯಶಸ್ವಿಯಾಗಿ ಪರೀಕ್ಷೆ ನಡೆಸಿ ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದರು.
ಶಿಕ್ಷಣ ಸಚಿವ ಸುರೇಶ್‌ಕುಮಾರ್ ಕ್ರಿಯಾಶೀಲರು, ಪರೀಕ್ಷಾ ಕೇಂದ್ರಕ್ಕೆ ಖುದ್ದು ಭೇಟಿ ನೀಡುವುದಾಗಿ ಹೇಳಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿ ನಾವು, ಸಂಸದರು, ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುತ್ತೇವೆ ಎಂದರು.
ಜಿಲ್ಲೆಯ ಎಲ್ಲ 70 ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆಗೆ ಮುನ್ನ ಹಾಗೂ ನಂತರ ಸ್ಯಾನಿಟೈಸ್ ಮಾಡಬೇಕು, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಅಂತರ ಪಾಲನೆಯಾಗಬೇಕು, ಮಕ್ಕಳಿಗೆ ಬೆಂಚು, ಡೆಸ್ಕ್ ವ್ಯವಸ್ಥೆ ಮಾಡಬೇಕು, ನೆಲದಲ್ಲಿ ಕುಳ್ಳಿರಿಸಬೇಡಿ, ಆಂಬ್ಯುಲೆನ್ಸ್ ಸಿದ್ಧವಾಗಿಡಬೇಕು, ಮಕ್ಕಳಿಗೆ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ನೀಡುವವರು ಕೈಗವಸು ಧರಿಸಿರಬೇಕು ಎಂದು ಸೂಚಿಸಿದರು.
ಪರೀಕ್ಷೆ ದಿನದಂದು ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ಸೂಚಿಸಿದ ಸಚಿವರು, ಪರೀಕ್ಷಾ ಅವ್ಯವಹಾರಕ್ಕೆ ಆಸ್ಪದ ಇಲ್ಲದಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮೂರು ತಿಂಗಳ ನಂತರ ಮನೆಯಿಂದ ಶಾಲೆಗೆ ಬರುತ್ತಿದ್ದಾರೆ. ಮಕ್ಕಳನ್ನು ಸೂಕ್ಷ್ಮವಾಗಿ ಪರಿಗಣಿಸಿ, ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು, ಶೌಚಗೃಹ ಸ್ವಚ್ಛವಾಗಿಟ್ಟುಕೊಳ್ಳಬೇಕು, ಮಕ್ಕಳಿಗೆ 20,000 ಬಟ್ಟೆ ಮಾಸ್ಕ್ ವ್ಯವಸ್ಥೆ ಮಾಡಲಾಗುವುದು. ಏನೇ ಅವಶ್ಯಕತೆ ಇದ್ದರೂ ಗಮನಕ್ಕೆ ತಂದರೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿ ಡಿಸಿ ಚಂದ್ರಶೇಖರ್ ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ ಮಾರ್ಗದಲ್ಲಿ 217 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಶಿಕ್ಷಣ ಇಲಾಖೆಯೂ ಪಟ್ಟಿ ಒದಗಿಸಿದಲ್ಲಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಪಂ ಸಿಇಒ ಎಚ್.ವಿ.ದರ್ಶನ್, ಎಸ್ಪಿ ಕಾರ್ತಿಕ್ ರೆಡ್ಡಿ, ಉಪವಿಭಾಗಾಧಿಕಾರಿ ಸೋಮಶೇಖರ್, ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್, ಬಿಇಒಗಳಾದ ಕೆಎಸ್.ನಾಗರಾಜಗೌಡ, ಉಮಾದೇವಿ, ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಹಾಗೂ ಎಲ್ಲ ಬಿಇಒಗಳು, ಇಸಿಒಗಳು ಹಾಜರಿದ್ದರು. ಶಿಕ್ಷಣ ಇಲಾಖೆಯಿಂದ ಹೊರತಂದಿರುವ ಕರೊನಾ ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು.
ಜಿಲ್ಲೆಯ 70 ಪರೀಕ್ಷೆ ಕೇಂದ್ರದಲ್ಲಿ 20,906 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜೂ.15ರಂದು ನಡೆಸಿದ ಎಸ್ಸೆಸ್ಸೆಲ್ಸಿ ಕಲ್ಪಿತ ಪರೀಕ್ಷೆಗೆ ಶಿಕ್ಷಣ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ಜಿಲ್ಲೆಗಳು ಇದೇ ಮಾದರಿ ಅನುಸರಿಸಲು ಸೂಚಿಸಿದ್ದಾರೆ. ಕೆ. ರತ್ನಯ್ಯ, ಡಿಡಿಪಿಐ