ಕಪ್ಪುಚುಕ್ಕೆ ಬರದಂತೆ ನೋಡಿಕೊಳ್ಳೋಣ

12-klr-5
Published on

ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಜಿಲ್ಲೆಯ 72 ಕೇಂದ್ರಗಳಲ್ಲಿ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಪೂರ್ವಸಿದ್ಧತೆ ಕುರಿತು ಚರ್ಚಿಸಲು ಶುಕ್ರವಾರ ಕರೆದಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಗೆ ಕಪ್ಪುಚುಕ್ಕೆ ಬಾರದಂತೆ ಪರೀಕ್ಷೆ ನಡೆಸಿ ಉತ್ಕೃಷ್ಟತೆಗೆ ಸಾಕ್ಷಿಯಾಗೋಣ ಎಂದರು.

ಪರೀಕ್ಷಾ ಕೇಂದ್ರದಲ್ಲಿ ಪ್ರತಿ 200 ಮಂದಿಗೆ ಒಂದು ಥರ್ಮಲ್ ಸ್ಕ್ರೀನಿಂಗ್ ಒದಗಿಸಿರುವ ಕುರಿತು ಡಿಡಿಪಿಐ ಕೆ.ರತ್ನಯ್ಯಗೆ ಮಾಹಿತಿ ನೀಡಿ, ನಗರ ವ್ಯಾಪ್ತಿಯ 34 ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿಸಿಕೊಡಲು ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಕೆ.ರಂಗಸ್ವಾಮಿಗೆ ಸೂಚಿಸಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಗಳು ಈ ಕಾರ್ಯ ನಡೆಸಲು ತಾಪಂ ಇಒಗಳಿಗೆ ಆದೇಶಿಸಿದರು.

ಜೂ.18 ರಂದು ದ್ವಿತೀಯ ಪಿಯು ಇಂಗ್ಲಿಷ್ ಹಾಗೂ ಜೂ.25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಎಇ ಸುಬ್ರಮಣಿಗೆ ಸೂಚಿಸಿದರು.

ತಮಿಳುನಾಡು ಗಡಿಗ್ರಾಮಗಳಿಂದ ಮಾಲೂರಿಗೆ ಪರೀಕ್ಷೆಗೆ ಬರುವ 9 ಮಕ್ಕಳಿದ್ದು, ಅವರನ್ನು ಈಗಿನಿಂದಲೇ ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲು ಬಿಇಒ ಅವರಿಗೆ ಸೂಚಿಸಿದರಲ್ಲದೆ ದ್ವಿತೀಯ ಪಿಯು ಪರೀಕ್ಷೆಗೂ ಹೊರ ರಾಜ್ಯಗಳಿಂದ ಬರುತ್ತಿರುವ 60 ಮಕ್ಕಳ ಬಗ್ಗೆಯೂ ಎಚ್ಚರ ವಹಿಸುವಂತೆ ಸೂಚಿಸಿದರು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಹಾಗೂ ಕ್ವಾರಂಟೈನ್ ಕೇಂದ್ರಗಳಾಗಿದ್ದ 34 ಶಾಲೆಗಳ ಸೋಂಕು ನಿವಾರಣೆಗೆ ಅಗ್ನಿಶಾಮಕ ದಳದ ಸಿಐ ಬಿಎಂ.ರಾಘವೇಂದ್ರ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಆರ್ಥಿಕ ಸಮಸ್ಯೆ ಇದ್ದರೆ ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಪರೀಕ್ಷೆಗಳ ಅವಧಿಯಲ್ಲಿ ಹೆಚ್ಚುವರಿ ಬಸ್ ಓಡಿಸುವ ಬಗ್ಗೆ ಡಿಸಿ ಸೂಚನೆಗೆ ಸ್ಪಂದಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಯಾವ ಮಾರ್ಗದಲ್ಲಿ ಬಸ್‌ನ ಅಗತ್ಯ ಇದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದಲ್ಲಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಪರವಾಗಿ ಬಂದಿದ್ದ ಡಾ.ಚಂದ್ರಶೇಖರ್, ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಸ್ಕೌಟ್ಸ್ ರೋವರ್ಸ್‌ಗಳನ್ನು ನೇಮಿಸಲಾಗಿದೆ. ಮಕ್ಕಳಿಗೆ ಉಚಿತ ಮಾಸ್ಕ್ ವಿತರಿಸುತ್ತಿರುವುದಾಗಿ ತಿಳಿಸಿದರು.

ಶ್ರೀನಿವಾಸಪುರ ಬಿಇಒ ಉಮಾದೇವಿ, ತಮ್ಮ ತಾಲೂಕಿನಲ್ಲಿ ಖಾಸಗಿ ಶಾಲೆಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಿಸಿರುವುದಾಗಿ ತಿಳಿಸಿದಾಗ ಡಿಸಿ ಅಭಿನಂದಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಬಿಇಒ ಕೆ.ಎಸ್.ನಾಗರಾಜಗೌಡ, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣೇಗೌಡ, ರೋಟರಿ ಉಪ ರಾಜ್ಯಪಾಲ ಲಕ್ಷ್ಮೀನಾರಾಯಣ ಸಭೆಗೆ ಮಾಹಿತಿ ಒದಗಿಸಿದರು. ವೀಕ್ಷಕ ರಘುನಾಥರೆಡ್ಡಿ, ಡಿವೈಪಿಸಿ ಮೋಹನ್ ಬಾಬು, ಇಒ ಸಿ.ಆರ್.ಅಶೋಕ್, ಬಿಇಒಗಳಾದ ನಾಗರಾಜಗೌಡ, ಕೆಂಪಯ್ಯ, ಗಿರಿಜೇಶ್ವರಿದೇವಿ, ಕೃಷ್ಣಮೂರ್ತಿ, ಶಂಕರ್‌ಕಾವಲಿ ಇತರರಿದ್ದರು.

ಪರೀಕ್ಷೆ ಸಂದರ್ಭದಲ್ಲಿ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ, ಕೇಂದ್ರಗಳ ಸುತ್ತ ಜೆರಾಕ್ಸ್ ಬಂದ್ ಮಾಡಲಾಗುವುದು. ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಸಾಗಣೆ ಮಾರ್ಗಗಳಿಗೆ ಪೊಲೀಸ್ ಭದ್ರತೆ ಕುರಿತು ಡಿವೈಎಸ್‌ಪಿ ರಘು ಅವರು ಸಹಮತ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net