

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದ ಜಿಲ್ಲೆಯ ಸುಮಾರು 40 ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆಯಲು ಅನರ್ಹರಾಗಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎನ್ನಲಾಗಿದ್ದು, ಇಂಥ ವಿದ್ಯಾರ್ಥಿಗಳು ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ರೀ ಅಡ್ಮಿಷನ್ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಕ್ರವಾರವಷ್ಟೇ ಆರಂಭವಾಗಿದೆ, ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 14103 ವಿದ್ಯಾರ್ಥಿಗಳ ಪೈಕಿ 13919 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಇದರಲ್ಲಿ 184 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದರಲ್ಲಿ ಪ್ರಸ್ತುತ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಸುಮಾರು 40 ವಿದ್ಯಾರ್ಥಿಗಳು ಹಾಜರಾತಿ ಕೊರತೆ ಕಾರಣ ಪ್ರವೇಶ ಪತ್ರ ನಿರಾಕರಣೆಗೊಳಲಾಗಿದ್ದಾರೆ ಎನ್ನಲಾಗಿದೆ. ಉಳಿದ ರಿಪೀಟರ್ಸ್ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ 2 ಹಾಗೂ ಪರೀಕ್ಷೆ 3 ನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಗೈರುಹಾಜರಿ ಬಗ್ಗೆ ತನಿಖೆ: ನಾಲ್ಕೂ ತಾಲೂಕುಗಳನ್ನೊಳಗೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳ ಹೆಚ್ಚಿನ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಸುಮಾರು 80 ವಿದ್ಯಾರ್ಥಿಗಳು ಪ್ರವೇಶಪತ್ರ ಪಡೆದಿಲ್ಲ ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣ ಹುಡುಕಲು ಇಲಾಖೆ ಮುಂದಾಗಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಶಾಲಾ ಶುಲ್ಕ ಭರಿಸದ ಕಾರಣ ಪ್ರವೇಶ ಪತ್ರ ನೀಡಲಾಗಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಈ ರೀತಿಯಾಗಿ ಕಂಡುಬಂದರೆ ಶಾಲಾ ಆಡಳಿತ ಮಂಡಳಿ ಹೊಣೆ ಹೊರಬೇಕಿದೆ. ಉಳಿದಂತೆ ಬಡತನ, ಕೌಟುಂಬಿಕ ಕಾರಣ, ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಸಂದರ್ಭ ಇತ್ಯಾದಿ ಕಾರಣಗಳಿರಬಹುದು ಎಂದು ಅಂದಾಜಿಸಲಾಗಿದ್ದು ಪ್ರವೇಶ ಪತ್ರ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳ ಪೂರ್ವಾಪರ ವಿಚಾರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ನೋಂದಣಿಯಾದವರಿಗಷ್ಟೇ ಅವಕಾಶ: ಪ್ರಸಕ್ತ ಸಾಲಿನಲ್ಲಿ ರಿಪೀಟರ್ಸ್‌ಗಳು ಗೈರುಹಾಜರಾಗಿದ್ದರೆ ಅವರು ಮುಂದಿನ ಪರೀಕ್ಷೆ 2 ಹಾಗೂ ಪರೀಕ್ಷೆ 3ನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವಿದೆ ಆದರೆ ಅವರು ಈಗಾಗಲೇ ಪರೀಕ್ಷೆಗೆ ನೋಂದಾಯಿಸಿಕೊಂಡಿರಬೇಕು. ಇಲ್ಲವಾದರೆ ಈ ಸಾಲಿನಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಶಂಕೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಗಧಿ ಮಾಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾಗಳನ್ನು ನಾಶಪಡಿಸಿದ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈ ಕೃತ್ಯದಲ್ಲಿ ವಿದ್ಯಾರ್ಥಿಗಳೇ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಜೂನಿಯರ್ ವಿದ್ಯಾರ್ಥಿಗಳೇ ಹೆಚ್ಚು ಪಾಲ್ಗೊಂಡಿರುವ ಗುಮಾನಿ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಹಾಲಿ ಎಸ್ಸೆಸ್ಸೆಲ್ಸಿ ಬರೆಯುತ್ತಿರುವ ವಿದ್ಯಾರ್ಥಿಗಳ ಜತೆಗೂಡಿ ಕೃತ್ಯ ಎಸಗಿರಬಹುದು ಎನ್ನಲಾಗಿದ್ದು, ಸಾಮೂಹಿಕ ನಕಲು ಮಾಡಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ ಎನ್ನಲಾಗಿದೆ. ಗುರುವಾರ ರಾತ್ರಿ 10 ಕೊಠಡಿಗಳಲ್ಲಿ 14 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ 6 ಕ್ಯಾಮರಾಗಳನ್ನು ದುಷ್ಕರ್ಮಿಗಳು ಕಿತ್ತು ಎಸೆದಿದ್ದರು. ಪರೀಕ್ಷಾ ಕೇಂದ್ರಕ್ಕೆ ಬಂದು ಗೇಟ್ ಹಾಗೂ ಕೊಠಡಿಗಳ ಬಾಗಿಲು ಮುರಿದು, ಕೊಠಡಿಗಳಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಿತ್ತು ಎಸೆದಿದ್ದರು, ಮುಂಜಾನೆ ಶಿಕ್ಷಕರು ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಮಕ್ಕಳ ಸ್ನೇಹಿ ಪರೀಕ್ಷೆ ಎಂಬ ಧ್ಯೇಯವಾಕ್ಯದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತಿದ್ದು ಎಲ್ಲ ಕಡೆಯಲ್ಲಿಯೂ ಸುಸೂತ್ರವಾಗಿ ಮೊದಲ ದಿನ ಪರೀಕ್ಷೆ ನಡೆದಿದೆ. ಪ್ರಸಕ್ತ ಸಾಲಿನಲ್ಲಿ 184 ವಿದ್ಯಾರ್ಥಿಗಳು ಗೈರಾಗಿದ್ದು, ಇದರಲ್ಲಿ ಕಲಿಕೆಯಲ್ಲಿದ್ದ ಸುಮಾರು 40 ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಿಕ್ಕಿಲ್ಲ ಎಂಬ ಮಾಹಿತಿ ಇದೆ, ಇಂಥ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಎಸ್ಸೆಸ್ಸೆಲ್ಸಿ ಕಲಿಯಬಹುದು, ಜತೆಗೆ ಗೈರಾಗಿರುವ ರಿಪೀಟರ್ಸ್‌ಗಳು ಪರೀಕ್ಷೆ 2 ಹಾಗೂ ಪರೀಕ್ಷೆ 3ನಲ್ಲಿ ಪರೀಕ್ಷೆ ಎದುರಿಸಲು ಅವಕಾಶವಿದೆ.
ಬೈಲಾಂಜನಪ್ಪ, ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ