ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಾಲೆ ದತ್ತು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹೊಣೆ

14-klr-1
Published on

ಕೋಲಾರ: ಪಾಲಾರ್-ಪೆನ್ನಾರ್ ನದಿ ಕಣಿವೆ ವಿಚಾರದಲ್ಲಿ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈ ಕಣಿವೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂ ವಿವರಗಳನ್ನು 3 ದಿನದೊಳಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಎಚ್.ವಿ. ದರ್ಶನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ರಿಟ್ ಪಿಟಿಷನ್ ಸಂಬಂಧ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಈ ವಾರ ವರದಿ ನೀಡಬೇಕಿದೆ. ಹಾಗಾಗಿ ಜಿಲ್ಲೆಯಲ್ಲಿ ಈ ನದಿಗಳ ವ್ಯಾಪ್ತಿಯಲ್ಲಿ ಕೃಷಿ, ಸಣ್ಣ ನೀರಾವರಿ ಇಲಾಖೆ, ಕೆಆರ್‌ಐಡಿಎಲ್, ಪಿಆರ್‌ಇಡಿ, ಗ್ರಾಪಂನಿಂದ ನಿರ್ಮಿಸಿರುವ ಚೆಕ್‌ಡ್ಯಾಂಗಳಿದ್ದಲ್ಲಿ ಮಾಹಿತಿ ನೀಡಬೇಕು. ಕೋರ್ಟ್ ವಿಚಾರವಾಗಿರುವುದರಿಂದ ಎಚ್ಚರ ವಹಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅಧಿಕಾರಿಗಳಿಗೆ ದತ್ತು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಫಲಿತಾಂಶವನ್ನು 6 ರಿಂದ 1ನೇ ಸ್ಥಾನಕ್ಕೇರಿಸುವ ಗುರಿಯಿದ್ದು ಮಕ್ಕಳ ಭಯ ಹೋಗಲಾಡಿಸಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ 2-3 ಶಾಲೆಗಳನ್ನು ಗುರುತಿಸಿ ದತ್ತು ನೀಡಲಾಗುವುದು. ಅಧಿಕಾರಿಗಳು ಎರಡು ಬಾರಿ ಶಾಲೆಗೆ ತೆರಳಿ ಸಂವಾದ, ತಾವು ನಡೆದು ಬಂದ ಹಾದಿ ಕುರಿತು ಮಕ್ಕಳಿಗೆ ಪ್ರೇರಣಾದಾಯಕ ನುಡಿಗಳನ್ನಾಡಿ ಉತ್ತೇಜಿಸಬೇಕು ಎಂದರು.

ಗುಮಾಸ್ತನ ಬಲಿ ಹಾಕಬೇಡಿ: ಶಿಕ್ಷಣ ಇಲಾಖೆಯಲ್ಲಿ ಸಾಧನ ಸಲಕರಣೆಗೆಂದು ಬಿಡುಗಡೆಯಾದ 30 ಲಕ್ಷ ರೂ. ಬಳಸದಿರುವ ಬಗ್ಗೆ ತನಿಖೆ ನಡೆದು ಕರ್ತವ್ಯ ನಿರ್ಲಕ್ಷಿಸಿದ ಸಿಬ್ಬಂದಿ ಯಾರಬ್ ಪಾಷಾ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಶಿಕ್ಷಣಾಧಿಕಾರಿಗಳು ಸಭೆ ಗಮನಕ್ಕೆ ತಂದಾಗ ಗುಮಾಸ್ತನನ್ನು ಬಲಿ ಹಾಕಬೇಡಿ, ಮೇಲಧಿಕಾರಿ ವಿರುದ್ಧ ಕ್ರಮ ಆಗಬೇಕೆಂದು ಅಧ್ಯಕ್ಷ ಸಿ.ಆರ್.ವೆಂಕಟೇಶ್ ಒತ್ತಾಯಿಸಿದರು.

ಆರ್ಥಿಕ ವರ್ಷದಲ್ಲಿ ಯಾವುದೇ ಇಲಾಖೆಯಲ್ಲಿ ಅನುದಾನ ವಾಪಸಾಗಬಾರದು, ಮಾರ್ಚ್‌ನೊಳಗೆ ಖರ್ಚು ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ ಅಧ್ಯಕ್ಷರು, ರೇಷ್ಮೆ ಇಲಾಖೆಯಲ್ಲಿ ಸರ್ಕಾರಿ ಯೋಜನೆಯಡಿ ಒಂದೇ ಕುಟುಂಬ ಸೌಲಭ್ಯ ಪಡೆದಿರುವ ವಿಚಾರದಲ್ಲಿ ಕ್ರಮ ಆಗಿಲ್ಲ, ನೋಡ್ತೀವಿ, ಮಾಡ್ತೀವಿ ಎಂದು ಹೇಳುತ್ತಿದ್ದಾರೆ. ಇದು ಆಗಬಾರದು ಎಂದರು.

ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿ 108 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಮುಖ್ಯವಾಹಿನಿಗೆ ತರುವ ಕೆಲಸ ಆಗುತ್ತಿದೆ. 1 ಮಕ್ಕಳಿರುವ 6 ಶಾಲೆ, 1ರಿಂದ 5 ಮಕ್ಕಳಿರುವ 38 ಶಾಲೆಗಳನ್ನು ಗುರುತಿಸಲಾಗಿದೆ. 24 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ನಡೆಯುತ್ತಿದೆ. ಮುಂದಿನ ವರ್ಷ ಉರ್ದು ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಆರಂಭಿಸಲಾಗುವುದು ಎಂದರು. ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಸಿಇಒ ಎಚ್.ವಿ. ದರ್ಶನ್, ಉಪಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.

ಶಿಷ್ಟಾಚಾರ ಉಲ್ಲಂಘನೆ: ಶ್ರೀನಿವಾಸಪುರದ ಜೆ.ತಿಮ್ಮಸಂದ್ರ ಗ್ರಾಪಂ ಕಟ್ಟಡ ಶುಕ್ರವಾರ ಉದ್ಘಾಟನೆಯಾಗಿದ್ದು, ಆ ಭಾಗದ ಸದಸ್ಯನಾದ ನನಗೆ ಆಹ್ವಾನವಿಲ್ಲ, ಶಿಷ್ಟಾಚಾರ ಉಲ್ಲಂಘಿಸಿರುವುದು ಸದಸ್ಯರಿಗೆ ಮಾಡಿದ ಅವಮಾನ. ಪಿಡಿಒ, ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು, ಇಲ್ಲವಾದಲ್ಲಿ ಸಭೆ ಬಹಿಷ್ಕರಿಸುವುದಾಗಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ವಿಚಾರ ಪ್ರಸ್ತಾಪಿಸಿದರು. ಧ್ವನಿಗೂಡಿಸಿದ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಶಿಷ್ಟಾಚಾರ ಪಾಲಿಸುವಂತೆ ಅಧಿಕಾರಿಗಳಿಗೆ ಪದೇಪದೆ ಹೇಳುತ್ತಿದ್ದರೂ ನಿರ್ಲಕ್ಷಿಸುವುದು ಸರಿಯಲ್ಲ. ಕ್ರಮ ಜರುಗಿಸಿದರೆ ಇತರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂದಾಗ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸಿಇಒ ದರ್ಶನ್ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net