ಎಸ್ಎಸ್ ಕೆ ಸಮಾಜದ ಮಂದಿರಗಳಲ್ಲಿ ಪೂಜೆ, ರಾಮಮಂದಿರ ಉದ್ಘಾಟನೆಯಂದು ದೀಪೋತ್ಸವ

IMG_20240113_111332_67.jpg
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಜ. 22ರಂದು ಎಲ್ಲ ಎಸ್ಎಸ್ಕೆ ಸಮಾಜದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಅಶೋಕ ಕಾಟವೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಮಾಜದ ಟ್ರಸ್ಟ್ ಕಮಿಟಿ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತೆ ಕೈಗೊಳ್ಳುವುದು, ವಿಶೇಷ ಪೂಜೆ ನಂತರ ಪ್ರಸಾದ ವಿತರಣೆ ಮಾಡಬೇಕು. ಸಂಭ್ರಮದ ದೀಪೋತ್ಸವ ನೆರವೇರಿಸಬೇಕೆಂದು ಸಮಾಜದಿಂದ ಸೂಚಿಸಲಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡದ 22 ದೇವಸ್ಥಾನ ಹಾಗೂ ರಾಜ್ಯದ ವಿವಿಧೆಡೆಯ ಸುಮಾರು 100ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಈ ಸಂಭ್ರಮ ನಡೆಯಲಿದೆ. ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿರುವ ಗಣೇಶ, ಮಾರುತಿ, ದುರ್ಗಾದೇವಿ, ತುಳಜಾಭವಾನಿ ಎಲ್ಲ ದೇವಸ್ಥಾನಗಳಲ್ಲಿ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ವಿಎಕೆ ಫೌಂಡೇಷನ್ ವತಿಯಿಂದ ಗೋಪನಕೊಪ್ಪ ಸರ್ಕಲ್ನಲ್ಲಿ ಜ. 19ರಂದು ಕರಸೇವಕರಿಗೆ ಸತ್ಕಾರ ಸಮಾರಂಭ ಹಾಗೂ ಜ. 22ರಂದು ದಾಜಿಬಾನಪೇಟೆಯಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಫೌಡೇಷನ್ನ ವೆಂಕಟೇಶ ಕಾಟವೆ ತಿಳಿಸಿದರು.

ಸಿದ್ವಿರಪ್ಪನ ಪೇಟೆ ದಿವಟೆ ಓಣಿಯಲ್ಲಿಯೂ ಅಂದು ವಿವಿಧ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಜು ಜರತಾರರ ತಿಳಿಸಿದರು.
ಸಮಾಜದ ಮುಖಂಡರಾದ ಗೋಪಾಲ ಬದ್ದಿ, ನೀಲಕಂಠಸಾ ಜಡಿ, ವಿಠ್ಠಲ ಲದವಾ, ಡಿ.ಕೆ. ಚವ್ಹಾಣ, ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net