ಧರ್ಮ ಪಾಲನೆ ಎಲ್ಲರ ಕರ್ತವ್ಯ, ಕೇಂದ್ರ ಸಚಿವ ಜೋಶಿ ಅಭಿಮತ, ಎಸ್ ಎಸ್ ಕೆ ಪಂಚ ಟ್ರಸ್ಟ್ ನಿಂದ ಸಹಸ್ರ ಚಂಡಿಕಾಯಾಗ

IMG_20250504_212005_948-1.jpg
Published on

ಹುಬ್ಬಳ್ಳಿ : ಹಿಂದುಗಳಲ್ಲಿ ಮಾತ್ರ ಧರ್ಮ ಮತ್ತು ಪೂಜಾ ಪದ್ಧತಿ ಬೇರೆಬೇರೆಯಾಗಿವೆ. ಧರ್ಮ ಎಲ್ಲರೂ ಪಾಲನೆ ಮಾಡುವಂತದ್ದು, ಪೂಜೆ ಇಷ್ಟವಿದ್ದರೆ ಮಾತ್ರ ಮಾಡಬಹುದು. ಆದರೆ, ಕೆಲವರು ಧರ್ಮ ಆಚರಣೆಗಳನ್ನು ಥಳಕು ಹಾಕಿಕೊಂಡು ಹಿಂದುಗಳ ಬಗ್ಗೆ ವಿರೋಧಿ ಭಾವನೆ ಬೆಳೆಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

ಇಲ್ಲಿಯ ದಾಜಿಬಾನಪೇಟೆಯ ಎಸ್ ಎಸ್ ಕೆ ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ಲೋಕಕಲ್ಯಾಣಾರ್ಥ ಶ್ರೀದುರ್ಗಾದೇವಿ ಸಹಸ್ರ ಚಂಡಿಕಾಯಾಗ ಸಂಕಲ್ಪ ಪೂಜೆ ಧಾರ್ಮಿಕ ಸಮಾರಂಭ ಹಾಗೂ ನೂತನ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇವಸ್ಥಾನಗಳಲ್ಲಿ ಲೋಕಕಲ್ಯಾಣಾರ್ಥವಾಗಿ ದೇವತಾ ಕಾರ್ಯ ಮಾಡುವುದು ಹಿಂದುಗಳ ವೈಶಿಷ್ಟ್ಯವಾಗಿದೆ. ಇದರಲ್ಲಿಯೇ ಧರ್ಮ ಅಡಗಿದೆ. ವಸುಧೈವ ಕುಟುಂಬಕಂ ಎಂಬ ತತ್ವದಡಿ ಎಲ್ಲರನ್ನೂ ಒಂದೇ ಕುಟುಂಬದವರಂತೆ ಭಾವಿಸುತ್ತೇವೆ. ಆದರೆ, ಇಂತಹ ಆಚರಣೆ ಸಹಿಸದ ಕೆಲವರು ದಾಳಿ ಮಾಡುವ ಮಾನಸಿಕತೆ ಬೆಳೆಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಕಳೆದ ಕೆಲ ವರ್ಷಗಳಿಂದ ದೇಶದ ಗಡಿ ಬಿಟ್ಟರೆ ಎಲ್ಲೂ ದಾಳಿ ಆಗಿರಲಿಲ್ಲ. ಈಗ ಕಾಶ್ಮೀರದಲ್ಲಿ ಪಾಕ್ ಪ್ರೇರಿತ ದಾಳಿಯಾಗಿದೆ. ಭಾರತ ಸಂಕಲ್ಪ ಮಾಡಿದೆ. ದಾಳಿಗೆ ಕಾರಣರಾದವರಿಗೆ ನೆನಪಿಡುವಂತಹ ಶಿಕ್ಷೆ ನೀಡಲಿದೆ. ಹಿಂದುಗಳಿಗೆ ವೀರತ್ವ, ವೀರ ಮನೋಭಾವ, ಕ್ಷಾತ್ರ ತೇಜಸ್ಸನ್ನು ನೀಡುವ ಯಾಗ, ಹೋಮಗಳು ಮತ್ತಷ್ಟು ಶಕ್ತಿ ತುಂಬುತ್ತವೆ ಎಂದರು.

ದೇಶ ರಕ್ಷಣೆಯಲ್ಲಿ ಕ್ಷತ್ರಿಯ ಸಮಾಜದ ಕೊಡುಗೆ ಬಹಳಷ್ಟಿದೆ. ಹಿಂದುಗಳ ಪರ, ರಾಮ ಮಂದಿರದ ಪರ ಸಮಾಜ ನಿಂತಿದೆ. ಬ್ರಿಟಿಷರು ಸಮಾಜವನ್ನು ಒಡೆದು ದೇಶ ಆಳಿದರು. ಹಾಗಾಗಿ ಹಿಂದುಗಳ ಒಕ್ಕಟ್ಟಾಗುವುದು ಅಗತ್ಯವಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಉಗ್ರರ ವಿರುದ್ಧ ಭಾರತ ಸರ್ಕಾರದ ಹೋರಾಟ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥ ಎಸ್ ಎಸ್ ಕೆ ಸಮಾಜದವರು ಕೈಗೊಂಡಿರುವ ಸಹಸ್ರ ಚಂಡಿಕಾಯಾಗ ಅಭಿನಂದನೀಯ ಕಾರ್ಯಕ್ರಮ. ದೇಶದ ಮೇಲೆ ಕೆಟ್ಟ ದೃಷ್ಟಿ ಬೀರಿದವರಿಗೆ ಪಾಠ ಕಲಿಸಲು ಸಮಸ್ತ ಹಿಂದು ಸಮಾಜ ಒಂದಾಗಬೇಕು ಎಂದರು.

ಯಜ್ಞ ಯಾಗಗಳು ನಿರಂತರವಾಗಿ ನಡೆಯಬೇಕು. ದೇವಾನುದೇವತೆಗಳ ಪೂಜೆ, ದೇಶದ ಬಗ್ಗೆ ಕಾಳಜಿ ಹೊಂದಿರುವುದು ಅಗತ್ಯ. ದೇಶದ ಸ್ಥಿತಿ ನೋಡಿದಾಗ ಹಿಂದು ಸಮಾಜ ಒಟ್ಟಾಗಿ ಹೋದಾಗಲೆ ಎಲ್ಲ ಸಮಸ್ಯೆ ಎದುರಿಸಲು ಸಾಧ್ಯ. ಕಾಶ್ಮೀರದಲ್ಲಿ ಹಿಂದುಗಳ ಮೇಲೆ ಆಗಿರುವ ದಾಳಿಗೆ ಭಾರತ ದಿಟ್ಟ ಉತ್ತರ ಕೊಡಲಿದೆ ಎಂದರು.

ಟ್ರಸ್ಟ್ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಪ್ರಾಸ್ತಾವಿಕ ಮಾತನಾಡಿ, ಹಿಂದು ಧರ್ಮ ಸಬಲತೆಗಾಗಿ ಸಹಸ್ರ ಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ವೇದಬ್ರಹ್ಮಶ್ರೀ ಶ್ರೀ ಚಂದ್ರೇಶ ಶರ್ಮಾ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸಹಸ್ರ ಚಂಡಿಕಾ ಯಾಗದ ಸಂಕಲ್ಪ ಮಾಡಿದಂತೆ ಈಗ ನಡೆಯುತ್ತಿದೆ. ಇದರೊಂದಿಗೆ 5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಲ್ಯಾಣ ಮಂಟಪವನ್ನು ಉದ್ಘಾಟನೆ ಮಾಡಲಾಗಿದೆ ಎಂದರು.

ಹಿಂದು ಧರ್ಮದ ವಿರೋಧಿಗಳಿಗೆ ಪಾಠ ಕಲಿಸಬೇಕಾದರೆ ನಮಗೆ ಬಲ ಕೊಡುವವಳು ದೇವಿ. ಮೇ 9ರಂದು ಪೂರ್ಣಾಹುತಿ ನಡೆಯಲಿದ್ದು, ಅದೇ ದಿನ ಪಾಕ್ ಗೆ ಬುದ್ಧಿ ಕಲಿಸಬೇಕು ಎಂಬುದು ನಮ್ಮ ಪ್ರಾರ್ಥನೆ ಎಂದರು.

ಪರಶುರಾಮ ಊಂಟವಾಲೆ ಅವರು ಸ್ಮರಣ ಸಂಚಿಕೆ ಬಗ್ಗೆ ವಿವರಣೆ ನೀಡಿದರು.
ಮಾಜಿ ಶಾಸಕ ಅಶೋಕ ಕಾಟವೆ, ವೆಂಕಟೇಶ ಕಾಟವೆ. ಸತೀಶ ಮೆಹರವಾಡೆ, ಟ್ರಸ್ಟ್ ಜಂಟಿ ಚೀಫ್ ಟ್ರಸ್ಟಿ ನೀಲಕಂಠಸಾ ಜಡಿ, ಚೀಫ್ ಟ್ರಸ್ಟಿ ತಾರಾಸಾ ಧೋಂಗಡಿ, ಅಶೋಕ ಕಲಬುರಗಿ, ನಾಗೇಂದ್ರ ಹಬೀಬ, ಅಶೋಕ ಪವಾರ, ವಿಠ್ಠಲ ಲದವಾ, ಗಣೇಶ ಶೇಟ್, ಶಶಿಕುಮಾರ ಮೆಹರವಾಡೆ, ಪ್ರಕಾಶ ಬುರಬುರೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net