ಹುಬ್ಬಳ್ಳಿಯಲ್ಲಿ ಎಸ್ ಎಸ್ ಕೆ ಸಮಾಜ ಸಮಾವೇಶ

IMG_20240411_130823_164.jpg
Published on

ಹುಬ್ಬಳ್ಳಿ: ನಾನು ರಾಜ್ಯಸಭೆ ಸದಸ್ಯನಾಗಿ ನೇಮಕವಾಗಲು ಸಾಧ್ಯವಾಗಿರುವುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹಕಾರದಿಂದ. ಮೊದಲಿನಿಂದಲೂ ಎಸ್ಎಸ್ಕೆ ಸಮಾಜ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ. ಮುಂದೆಯೂ ಇರಲಿದೆ ಎಂದು ನಾರಾಯಣಸಾ ಭಾಂಡಗೆ ಹೇಳಿದರು.

ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಬೆಂಬಲಿತ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿ, ನಮ್ಮ ಸಮಾಜ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ದೇಶ ರಕ್ಷಣೆ ನಮ್ಮ ಆದ್ಯತೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಮೋದಿ ಅವರಿಗೆ ಸಮನಾದ ನಾಯಕರು ಕಾಂಗ್ರೆಸ್ನಲ್ಲಿ ಯಾರೂ ಇಲ್ಲ ಎಂದರು.

ಕಾಂಗ್ರೆಸ್ಸಿನ ಕೆಲವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳುವ ಮೂಲಕ ತುಷ್ಟೀಕರಣಕ್ಕೆ ಇಳಿಯುತ್ತಿದ್ದಾರೆ. ಇದೇ ಜನ್ಮದಲ್ಲಿ ನಿಮ್ಮ ಆಸೆ ತೀರಿಸಿಕೊಂಡು ಬಿಡಿ ಎಂದು ಭಾಂಡಗೆ ವ್ಯಂಗ್ಯವಾಡಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಬೆಂಬಲಿಸುತ್ತಲೇ ಬಂದಿರುವ ಎಸ್ಎಸ್ಕೆ ಸಮಾವೇಶದಲ್ಲಿ ಮತ ಕೇಳಲು ಬಂದಿಲ್ಲ. ಬದಲಾಗಿ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇ. 100ರಷ್ಟು ವೋಟಿಂಗ್ ದಾಖಲಿಸಿ ಎಂದು ಮನವಿ ಮಾಡಿದರು.

ಸೈನಿಕರ ಶವದ ಮೇಲೆ ರಾಜಕಾರಣ ಮಾಡಿದ ಕಾಂಗ್ರೆಸ್ನವರು ಮೋದಿ ಸರ್ಕಾರದ ಪ್ರತಿ ಹೆಜ್ಜೆಯಲ್ಲಿ ಹುಳುಕು ಹುಡುಕಲು ಹೋದರು. ಆಟಿರ್ಕಲ್ 370 ಕಾಶ್ಮಿರ್ ವಿಷಯವನ್ನು ಕರ್ನಾಟಕದಲ್ಲಿ ಏಕೆ ಪ್ರಸ್ತಾಪಿಸುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರು ಕೇಳುತ್ತಾರೆ. ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಹಿಂದೆ ನಿಂತವರೆಲ್ಲ ಮುಸ್ಲಿಂ ಲೀಗ್ ಧ್ವಜ ಹಿಡಿದುಕೊಂಡಿದ್ದಾರೆ. ದೇಶ ಒಂದು ಎನ್ನುವ ಭಾವನೆ ಇವರಲ್ಲಿ ಬರುತ್ತಲೇ ಇಲ್ಲ. ಇವರ ಮನಸ್ಥಿತಿ ಯಾವ ಕಡೆ ಹೊರಟಿದೆ? ಎಂದು ಪ್ರಶ್ನಿಸಿದರು.

ಕಾಶ್ಮೀರ ಇವರಿಗೆ ದೇಶದ ಅವಿಭಾಜ್ಯ ಅಂಗ ಎಂದು ಅನಿಸುತ್ತಲೇ ಇಲ್ಲ. ಕುತ್ಸಿತ ಮನೋಭಾವದಿಂದ ಮಾತನಾಡುತ್ತಾರೆ. ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್ನವರನ್ನು ದೇಶದ ಜನರು ಈ ಚುನಾವಣೆಯಲ್ಲಿ ಸಂರ್ಪೂಣ ದೂರ ತಳ್ಳಲಿದ್ದಾರೆ ಎಂದರು.

ಸಹಸ್ರಾರ್ಜುನ ಮಂದಿರ ನಿರ್ಮಾಣ ಸೇರಿ ಎಸ್ಎಸ್ಕೆ ಸಮಾಜದ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದ ಜೋಶಿ, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜೋಶಿ ಅವರಿಗೆ ಸುಮಾರು 75 ಸಾವಿರ ಮತಗಳ ಲೀಡ್ ನೀಡಬೇಕು. ಇದಕ್ಕಾಗಿ ಎಲ್ಲರೂ ಶ್ರಮ ವಹಿಸೋಣ ಎಂದು ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಎಸ್ಎಸ್ಕೆ ಸಮಾಜವು ಧರ್ಮ, ಆಚರಣೆ ಮುಂತಾದ ವಿಷಯದಲ್ಲಿ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಜೀವನ ನಡೆಸುತ್ತಿದೆ. ಸಮಾಜದ ಜನರು ಬಿಜೆಪಿಯ ಶಕ್ತಿಯಾಗಿ ನಿಂತಿದ್ದಾರೆ. ಹಿಂದುತ್ವಕ್ಕಾಗಿ ಸತತ ಹೋರಾಟ ಮಾಡುತ್ತ ಬಂದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಅಶೋಕ ಕಾಟವೆ, ಜೋಶಿ ಅವರನ್ನು ಬೆಂಬಲಿಸುತ್ತ ಬಂದಿರುವ ಸಮಾಜದ ಜನರು ಈ ಬಾರಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಪಣ ತೊಟ್ಟಿದ್ದಾರೆ ಎಂದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಎಸ್ಎಸ್ಕೆ ಮುಖಂಡರಾದ ನಾಗೇಶ ಕಲಬುರ್ಗಿ, ಭಾಸ್ಕರ ಜಿತೂರಿ. ಡಾ. ಶಶಿ ಮೆಹರವಾಡೆ, ಯಲ್ಲಪ್ಪ, ಲಕ್ಷ್ಮಣ ದಲಬಂಜನ, ನೀಲಕಂಠಸಾ ಜಡಿ, ಗೋಪಾಲ ಬದ್ದಿ, ರಾಜು ಜರತಾರಘರ, ವೆಂಕಟೇಶ ಕಾಟವೆ, ಸೀಮಾ ಲದ್ವಾ, ಪುಷ್ಪಾ ಪವಾರ, ಇತರರು ಪಾಲ್ಗೊಂಡಿದ್ದರು.

ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ ಪ್ರಾಸ್ತಾವಿಕ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ರಂಗಾ ಬದ್ದಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net