ಮಕ್ಕಳ ಪ್ರೀತಿಗಳಿಸುವ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು

SS- SEND OFF
Published on

ಶನಿವಾರಸಂತೆ: ಮಕ್ಕಳ ಪ್ರೀತಿ ಮತ್ತು ಪಾಲಕರಿಂದ ಮನ್ನಣೆಗಳಿಸುವ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಎಂದು

ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಹೇಳಿದರು. ಆಲೂರು ಸಿದ್ದಾಪುರ ಪ್ರೌಢ ಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘ ಮಂಗಳ ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಸಿ.ಟಿ. ಸೋಮಶೇಖರ್ ಅವರಿಗೆ ಬೀಳ್ಕೊಡುಗೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ ಮಾತನಾಡಿ, ಶಿಕ್ಷಕರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ ಕೀರ್ತಿ ಸೋಮಶೇಖರ್‌ಗೆ ಸಲ್ಲುತ್ತದೆ ಎಂದರು. ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಮಡಿಕೇರಿಯಲ್ಲಿ ನಡೆದಾಗ ಅನೇಕ ಗಣ್ಯರನ್ನು ಒಟ್ಟು ಗೂಡಿಸಿ ಕಾರ್ಯಕ್ರಮ ಯಶಕ್ಕೆ ಕಾರಣಕರ್ತರಾಗಿದ್ದರು.

ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಶಿಕ್ಷಕರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿ ಇವರು ಎಂದು ಬಣ್ಣಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸೇತುವೆಯಾಗಿ ಶಾಲೆಗಳ ಅಭಿವೃದ್ಧಿಗೆ ಇವರು ಉತ್ತಮ ಕೊಡುಗೆ ನೀಡಿದ್ದಾರೆಂದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಮಂಜುನಾಥ ಮಾತನಾಡಿ, ಸೋಮಶೇಖರ್ ಅವರು ಉತ್ತಮ ಸಂಘಟಕರು. ಅವರಿಗೆ ಸಮಾಜಮುಖಿ ಕಾಳಜಿ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಿರುವುದು ಶ್ಲಾಘನೀಯ ಎಂದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವರಾಜ ಗೌಡ, ಹಾಸನ ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಪಿಲಿಪಾಸ್ ಮಾತನಾಡಿದರು.

ಕನ್ನಡ ಸಿರಿ ಬಳಗದ ಜಿಲ್ಲಾ ಅಧ್ಯಕ್ಷ ಲೋಕೇಶ ಸಾಗರ್, ಮಂಡ್ಯ ತಾಲೂಕು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕ ಸ್ವಾಮಿ , ಶೋಭಾ ಸೋಮ ಶೇಖರ್, ಶಿಕ್ಷಕ ಹಂಡ್ರಂಗಿ ನಾಗರಾಜ್, ಆಲೂರು ಸಿದ್ದಾಪುರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ, ಬೆಂಗಳೂರು ನಗರದ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ, ಹಾಸನ ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಗ್ರಾಪಂ ಸದಸ್ಯ ಸತೀಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net