ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

13ss3sanmanitary
Published on

40 ವರ್ಷದ ನಂತರ ಸಮ್ಮಿಲನಗೊಂಡ ಸ್ನೇಹಿತರು

  • ಶನಿವಾರಸಂತೆ: ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಶಾಸಕ ಡಾ.ಮಂಥರ್ ಗೌಡ ಹೇಳಿದರು.
    1983-1995ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ‘ಸಹಪಾಠಿ ಸ್ನೇಹಿತರ ಬಳಗ’ದಿಂದ ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು 40 ವರ್ಷದ ನಂತರ ಒಂದೆಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
    ಭವಿಷ್ಯ ರೂಪಿಸುತ್ತಾರೆ: ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಆದರೆ ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಾರೆ. ಇದು ಬೇಸರದ ಸಂಗತಿ ಎಂದು ಅವರು ಹೇಳಿದರು.ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಜಿ.ದೇವಯ್ಯ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಶ್ರೇಷ್ಠ ಮಟ್ಟದಲ್ಲಿ ಇರಬೇಕು ಎಂಬುದಕ್ಕಾಗಿ ಗುರುಗಳು ದಂಡಿಸುತ್ತಾರೆ. ಬಾಲ್ಯದಲ್ಲಿ ತಿದ್ದದೇ, ತಪ್ಪಿಗೆ ಶಿಕ್ಷೆ ನೀಡದೇ ಕಲಿಸುವ ಶಿಕ್ಷಣವು ನಿಜವಾದ ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳ ಬದುಕು ಹಸನಾಗಲಿ ಎಂದು ಮಾತ್ರ ಶಿಕ್ಷಕರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಕ- ಪಾಲಕರ ಸಂಬಂಧ ಉನ್ನತೀಕರಣಗೊಳ್ಳಬೇಕು ಎಂದರು.
    ನಿವೃತ್ತ ಶಿಕ್ಷಕ ಸಿ.ಎಲ್.ಸುಬ್ಬಯ್ಯ ಮಾತನಾಡಿ, ಪ್ರತಿಯೊಬ್ಬರೂ ಗುರು ಋಣ ಮತ್ತು ಪಿತೃಋಣಗಳನ್ನು ಸಾಕಷ್ಟು ತೀರಿಸುವ ಕಾರ್ಯ ಮಾಡಬೇಕು. ಇದರಿಂದ ಉತ್ತರೋತ್ತರ ಸಾರ್ಥಕತೆಯನ್ನು ಸಂಭ್ರಮಿಸಬಹುದು ಎಂದು ಹೇಳಿದರು. ನಿವೃತ್ತ ಶಿಕ್ಷಕಿ ರತಿ ಮಾತನಾಡಿ, 40 ವರ್ಷದ ಹಿಂದೆ ನಮ್ಮಿಂದ ಪಾಠ ಕೇಳಿದ ಮಕ್ಕಳು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿನಮ್ಮನ್ನು ನೆನಪಿಸಿಕೊಂಡು, ಗುರುವಂದನೆ ಸಲ್ಲಿಸಿರುವುದು ನಮ್ಮ ಬದುಕಿನ ಸುವರ್ಣ ಗಳಿಗೆ ಎಂದು ಶ್ಲಾಘಿಸಿದರು.
    ಮಾದರಿ ಕಾರ್ಯ: ನಿವೃತ್ತ ಪ್ರಾಂಶುಪಾಲ ಎಂ.ಆರ್. ನಿರಂಜನ ಮಾತನಾಡಿ-ವಿದ್ಯಾಭ್ಯಾಸ ಮುಗಿದ ನಂತರವೂ ವಿದ್ಯಾರ್ಥಿಗಳು ತಾವು ಓದಿದ ಪ್ರಾಥಮಿಕ, ಪ್ರೌಢ ಶಾಲೆ ಗುರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ಇದು ಮಾದರಿ ಕಾರ್ಯ ಎಂದರು. ಪ್ರೌಢಶಾಲಾ ವಿಭಾಗದ ನಿವೃತ್ತ ಶಿಕ್ಷಕ ಎಸ್.ಪಿ.ರಾಜು, ಶನಿವಾರಸಂತೆ ಸಿಆರ್‌ಪಿ ದಿನೇಶ್, ಹಿರಿಯ ವಿದ್ಯಾರ್ಥಿ ಮತ್ತು ಉಪನ್ಯಾಸಕ ಕೆ.ಪಿ.ಜಯಕುಮಾರ್ ಮಾತನಾಡಿದರು.
    ಗೌರವ ಸಮರ್ಪಣೆ: ನಿವೃತ್ತ ಶಿಕ್ಷಕರಾದ ಸಿ.ಎಲ್.ಸುಬ್ಬಯ್ಯ, ಡಿ.ಎಸ್.ರುಕ್ಮಿಣಿ, ದೊಡ್ಡಯ್ಯ, ಶಕುಂತಲಾ, ಹೇಮಾವತಿ, ವಿ.ಕೆ.ರತಿ, ನಾಗರತ್ನ, ಉತ್ತಪ್ಪ, ಜಿ.ಕೆ.ಲಕ್ಷ್ಮೀ ನಾರಾಯಣ ಭಟ್, ಎಸ್.ಪಿ.ರಾಜು, ಜಿ.ಬಿ.ನಾಗಪ್ಪ, ಎಂ.ಜಿ.ದೇವಯ್ಯ, ಶ.ಗ. ನಯನತಾರಾ, ಎಂ.ಎನ್.ಮಲ್ಲಿಕಾರ್ಜುನ, ವೇಣುಗೋಪಾಲ್, ಎಂ.ಆರ್.ನಿರಂಜನ, ಎಚ್.ಎ.ದೇವರಾಜ್, ಹೆಚ್.ಕೆ.ರಾಮನಂಜಯ್ಯ, ಎಚ್.ಸಿ.ಮಲ್ಲೇಶ್, ಡಿ.ರವಿಕುಮಾರ್ ಅವರಿಗೆ ಹಿರಿಯ ವಿದ್ಯಾರ್ಥಿಗಳು ಗೌರವ ಸಮರ್ಪಣೆ ಮಾಡಿದರು. ಇದೇ ಸಂದರ್ಭವಿವಿಧ ರಂಗದಲ್ಲಿ ಸಾಧನೆ ಮಾಡಿದ ಡಾ.ಪುಟ್ಟರಾಜು, ನಾಗರಾಜು ಮತ್ತು ಗಿರೀಶ್ ಅವರಿಗೆ ಸನ್ಮಾನಿಸಲಾಯಿತು. ಸಹಪಾಠಿ ಸ್ನೇಹ ಬಳಗದ ವಿನೋದ್ ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. 40 ವರ್ಷದ ನಂತರ ಮಿಲನಗೊಂಡ ಸಹಪಾಠಿಗಳು ಹಳೆಯ ದಿನಗಳನ್ನು ಮೆಲುಕು ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net