ತಡೆಗೋಡೆ ನಿರ್ಮಾಣ ಕಾಮಗಾರಿಗೆ ತಡೆ

SRP Water 1
Published on

 ಶ್ರೀರಂಗಪಟ್ಟಣ : ಪಟ್ಟಣದ ವಾಟರ್ ಗೇಟ್ ಒಳಭಾಗದ ಉತ್ತರ ಕಾವೇರಿ ನದಿಯಲ್ಲಿ ಗ್ರಾಮೀಣ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ನಡೆಸಲಾಗುತ್ತಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿ ಅಕ್ರಮ ಎಂದು ಆರೋಪಿಸಿ ಜನಜಾಗೃತಿ ವೇದಿಕೆ ಕಾರ್ಯಕರ್ತರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿವಾದಿತ ಸ್ಥಳಕ್ಕೆ ಭಾನುವಾರ ಆಗಮಿಸಿದ ವೇದಿಕೆ ಮುಖಂಡ ಚಂದನ್ ಹಾಗೂ ವಕೀಲ ಬಾಲರಾಜು ಮಾತನಾಡಿ, ಪಟ್ಟಣದ ಸುತ್ತಲೂ ಇರುವ ಕೋಟೆ ಭಾರತೀಯ ಸರ್ವೇಕ್ಷಣಾ ಹಾಗೂ ರಾಜ್ಯ ಪುರಾತತ್ವ ಇಲಾಖೆ ಸುರ್ಪದಿಗೆ ಸೇರಿದೆ.ಈ ಇಲಾಖೆಯಿಂದ ಕಾಮಗಾರಿ ನಡೆಸುವ ಸಂಬಂಧ ಮಾನ್ಯತೆ ಪಡೆದ ಯಾವುದೇ ಅಧಿಕೃತ ಆದೇಶ ಪತ್ರ ಇಲ್ಲ ಎ.ದರು. ಸ್ಮಾರಕಗಳ ಮೂಲ ಸ್ವರೂಪವನ್ನೇ ಬದಲಿಸುವಂತೆ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಳೀಯ ಆಡಳಿತದ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಮಾಡುವುದು ಅಕ್ರಮ ಎಂದು ವಾಟರ್ ಬೋರ್ಡಿನ (ಗ್ರಾಮೀಣ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ) ಎಇಇ ನದಾಫ್ ಮತ್ತು ಎಇ ಭಾಗ್ಯ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಇಇ ನದಾಫ್, ನದಿಗೆ ಪಟ್ಟಣದ ಚರಂಡಿ ನೀರು ಸೇರುವುದನ್ನು ತಡೆಯಲು ಕಳೆದ 2024ರ ನ. ನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಸುತ್ತಲೂ ಕಾಮಗಾರಿ ಆರಂಭಿಸಲಾಗಿದೆ. ಸೂಕ್ತ ಆದೇಶ ಸಿಗದ ಹಿನ್ನೆಲೆಯಲ್ಲಿ ಕೆಲ ತಿಂಗಳು ಕಾಮಗಾರಿ ನಿಲ್ಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಲೋಕಾಯುಕ್ತರು ಭೇಟಿ ನೀಡಿ ಚರಂಡಿ ನೀರು ಸೇರ್ಪಡೆ ಪರಿಶೀಲಿಸಿ ತಡೆಗಟ್ಟುವಂತೆ ಸೂಚನೆ ನೀಡಿದ ಕಾರಣ ಅಧಿಕೃತ ಪತ್ರ ಸಿಗುವವರೆಗೂ ಕ್ಷೇತ್ರದ ಶಾಸಕ, ಜಿಲ್ಲಾಧಿಕಾರಿ, ಪುರಸಭಾ ಮುಖ್ಯಾಧಿಕಾರಿಗಳ ಮೌಖಿಕ ಆದೇಶದಂತೆ (ಜಲ ಶುದ್ಧೀಕರಣ ಘಟಕಕ್ಕೆ ಚರಂಡಿ ನೀರು ಸೇರದಂತೆ ) ಬಂಡ್ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಅಕ್ರಮವೂ ನಡೆಯುತ್ತಿಲ್ಲ ಎಂದು ವಿವರಿಸಿದರು.

ಸ್ಥಳಕ್ಕೆ ಭಾರತೀಯ ಸರ್ವೇಕ್ಷಣಾ ಇಲಾಖೆ ಸೂಪರ್‌ವೈಸರ್ ವಸಂತ ಕುಮಾರ್ ಹಾಗೂ ಪಿಎಸ್‌ಐ ಶಿವಲಿಂಗ ದಳವಾಯಿ ಸೇರಿದಂತೆ ಪಟ್ಟಣದ ನಾಗರಿಕರೂ ಆಗಮಿಸಿದಾಗ ಉದ್ವಿಗ್ನತೆ ಉಂಟಾಯಿತು. ವಿವಿಧ ಇಲಾಖೆ ಅಧಿಕಾರಿಗಳ ಸಮಕ್ಷಮ ಚರ್ಚೆ ನಡೆಸಿ ಅಧಿಕೃತ ಆದೇಶ ಪಡೆಯುವ ತನಕ ಕಾಮಗಾರಿ ಸ್ಥಗಿತಗೊಳಿಸುವಂತೆ ಭಾರತೀಯ ಸರ್ವೆಕ್ಷಣಾ ಇಲಾಖೆಯ ಅಧಿಕಾರಿಗಳು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net