ತ್ರಿವಿಧ ದಾಸೋಹ ನಡೆಯುವ ಸ್ಥಳ ಶ್ರೀಸಿದ್ಧಾರೂಢಮಠ

h15-siddarudha
Published on

ಹುಬ್ಬಳ್ಳಿ: ಜ್ಞಾನ ಹಾಗೂ ಅನ್ನ ದಾಸೋಹ, ನಾಮಸ್ಮರಣೆ ಇಂಥ ತ್ರಿವಿಧ ದಾಸೋಹ ನಡೆಯುವ ಸ್ಥಳ ಸಿದ್ಧಾರೂಢ ಮಠ. ಈ ಪವಿತ್ರ ಸ್ಥಳಕ್ಕೆ ಆಗಮಿಸಿ ಜನರು ಕೃತಾರ್ಥರಾಗಬೇಕು ಎಂದು ಚಿಕ್ಕನಂದಿ-ಮಹಾಲಿಂಗಪೂರ ಶ್ರೀ ಸಿದ್ಧಾರೂಢ ದರ್ಶನ ಪೀಠದ ಸಹಜಯೋಗಿ ಶ್ರೀ ಸಹಜಾನಂದ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಗವಚ್ಚಿಂತನ ಸಾಧನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀಮಠದಲ್ಲಿ ಸತತವಾಗಿ ಹದಿನೈದು ವರ್ಷಗಳಿಂದ ಭಗವಚ್ಚಿಂತನ ಸಾಧನ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ. ಇದು ಅತ್ಯಂತ ಶ್ಲಾ್ಯಘನೀಯ ಕಾರ್ಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವಿಷಯಗಳ ಚಿಂತನೆ ಮಾಡುವ ಶಿಬಿರಗಳು ಸಾಕಷ್ಟು ನಡೆಯುತ್ತವೆ. ಆದರೆ ಸರ್ವ ಜೀವಿಗಳ ಆತ್ಮ ಸ್ವರೂಪಿಯಾದ ಭಗವಂತನ ಚಿಂತನೆ ನಡೆಯುವುದು ಅತಿ ವಿರಳ. ಇಂತಹದರಲ್ಲಿ ಶ್ರೀಮಠದಿಂದ ಈ ಶಿಬಿರ ನಡೆಯಿಸಿ ಶಿಬಿರಾರ್ಥಿಗಳಿಗೆ ವಿಚಾರ ಸಾಗರ ನೀಡಲಾಗುತ್ತಿದೆ ಎಂದರು.

ಗೋಕಾಕ ಶ್ರೀಶಾಮಾನಂದ ಆಶ್ರಮದ ಶ್ರೀ ಆತ್ಯಾನಂದ ಸ್ವಾಮೀಜಿ, ಅಣ್ಣಿಗೇರಿ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿ, ರನ್ನತಿಪೂರ ಶಿವಾನಂದ ಆಶ್ರಮದ ಶ್ರೀ ಬಸವರಾಜ ಸ್ವಾಮೀಜಿ, ಬೆಳಗಾವಿ ಅಲೌಕಿಕ ಧ್ಯಾನಮಂದಿರದ ಶ್ರೀ ಶಿವಾನಂದ ಗುರೂಜಿ, ಹನುಮನಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ, ರನ್ನಬೆಳಗಲಿಯ ಯೋಗಿರಾಜ ಶ್ರೀ ಸದಾಶಿವ ಗುರೂಜಿ, ಮಾತೋಶ್ರಿ ಶಶಿಕಲಾ ಮಾತಾ ಸಾನ್ನಿಧ್ಯ ವಹಿಸಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದ ಸಂಚಾಲಕ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ವೈಸ್-ಚೇರ್ಮನ್ ಉದಯಕುಮಾರ ನಾಯ್ಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಚನ್ನವೀರ ಮುಂಗುರವಾಡಿ, ಶ್ರೀಮಠದ ಮ್ಯಾನೇಜರ್ ಈರಣ್ಣ ತುಪ್ಪದ ಉಪಸ್ಥಿತರಿದ್ದರು.

ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ ನಿರೂಪಿಸಿದರು. ಧರ್ಮದರ್ಶಿ ಗೀತಾ ಕಲಬುರ್ಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net