

ವಿಜಯಪುರ: ಶ್ರೀ ಮದ್ಗೀರಿರಾಜ ಸೂರ್ಯಸಿಂಹಸನಾಧೀಶ್ವರ ಡಾ. ಚನ್ನಾಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ದ್ವಾದಶಿ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀಕ್ಷೇತ್ರ ಯಡೂರದಿಂದ ಸುಕ್ಷೇತ್ರ ಶ್ರೀಶೈಲದವರೆಗೆ ಅ.29ರಿಂದ ನಡೆಯುತ್ತಿರುವ ಬೃಹತ್ ಪಾದಯಾತ್ರೆ ನ.6ರಂದು ವಿಜಯಪುರಕ್ಕೆ ತಲುಪಲಿದೆ.
ಮಧ್ಯಾಹ್ನ 12 ಗಂಟೆಗೆ ಅಭಿನವ ಸಿದ್ಧಾರೂಢ ತಪೋವನದ ಹತ್ತಿರ ಶ್ರೀ ಅಭಿನವ ಸಿದ್ದಾರೂಢ ಸ್ವಾಮೀಜಿಗಳು ಪುರ ಪ್ರವೇಶ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರ ವಿಜಯಪುರದ ತೋಟದ ಮನೆಯಲ್ಲಿ ಮಹಾಪ್ರಸಾದ ಹಾಗೂ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
ನಂತರ ಮಧ್ಯಾಹ್ನ 2 ಗಂಟೆಗೆ ನಗರದ ಜೋರಾಪುರ ಪೇಠ ಗಲ್ಲಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಶಂಕರಲಿಂಗ ಗುಡಿ, ಶಿವಾಜಿ ಸರ್ಕಲ್, ಗಾಂಧಿ ಚೌಕ್, ಮಿಲನ್ ಸರ್ಕಲ್, ಸರ್ಾ ಬಜಾರ್, ರಾಮಮಂದಿರ ರಸ್ತೆ, ಅಮೀರ್ ಟಾಕೀಸ್, ಸಿದ್ದೇಶ್ವರ ದೇವಸ್ಥಾನ, ಬಸವೇಶ್ವರ ಸರ್ಕಲ್, ಬಾಗಲಕೋಟೆ ಕ್ರಾಸ್ ಮಾರ್ಗವಾಗಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ಜರುಗಲಿದೆ.
ರಾತ್ರಿ 7 ಗಂಟೆಗೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಮೈದಾನದಲ್ಲಿ ಧರ್ಮ ಸಭೆ ನಡೆಯಲಿದೆ. ಜೋರಾಪುರ ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿ ಹಾಗೂ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯಿಂದ ರಾತ್ರಿ 9 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಸರ್ವ ಭಕ್ತಾದಿಗಳು ಈ ಎಲ್ಲ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಶ್ರೀ ಮಲ್ಲಿಕಾರ್ಜುನ ಪಾದಯಾತ್ರಾ ಕಮಿಟಿ ಹಾಗೂ ಶ್ರೀ ನೀಲಕಂಟೇಶ್ವರ ಪಾದಯಾತ್ರೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.