ಮಠ-ಮಂದಿರಗಳ ಶಿಕ್ಷಣ ಸಂಸ್ಥೆಯಲ್ಲಿ ಮೊಟ್ಟೆ ವಿತರಿಸದಂತೆ ಶ್ರೀಶೈಲ, ಕಾಶಿ ಜಗದ್ಗುರುಗಳ ಆಗ್ರಹ

Egg
Published on

ಬೆಂಗಳೂರು: ಮಠ-ಮಂದಿರಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ವಿತರಣೆ ಮಾಡದಂತೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹಾಗೂ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರಿ ಮತ್ತು ಅನುದಾನಿ ಶಾಲೆಗಳಲ್ಲಿ ಈಗಾಗಲೇ ವಾರದ ಎರಡು ದಿನ ವಿತರಿಸುತ್ತಿದ್ದ ಮೊಟ್ಟೆಯನ್ನು ವಾರದ ಆರು ದಿನವೂ ವಿತರಿಸಲು ಸರ್ಕಾರ ಮುಂದಾಗಿದ್ದು, ಮೊಟ್ಟೆ ತಿನ್ನಲಾರದವರಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ನೀಡುವ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ. ಆದರೆ ಧಾರ್ಮಿಕ ಸಂಸ್ಥೆಗಳು ನಡೆಸುವ ಶಾಲೆಗಳಲ್ಲಿ ಅಭ್ಯಾಸ ಮಾಡುವ ಎಲ್ಲ ವಿದ್ಯಾರ್ಥಿಗಳಿಗೂ ಶೇಂಗಾ ಚಿಕ್ಕಿ ಮತ್ತು ಬಾಳೆಹಣ್ಣು ಮಾತ್ರ ವಿತರಿಸಲು ಸರ್ಕಾರ ಆದೇಶಿಸಬೇಕು. ಮೊಟ್ಟೆ ತಿನ್ನುವ ವಿದ್ಯಾರ್ಥಿಗಳ ಹೆಸರಲ್ಲಿ ಧಾರ್ಮಿಕ ಸಂಸ್ಥೆಯ ಆವರಣದಲ್ಲಿ ಮೊಟ್ಟೆಯನ್ನು ತರುವುದು ಧಾರ್ಮಿಕ ಆಚರಣೆಗಳಿಗೆ ಅಪಚಾರವಾಗುತ್ತದೆ. ಇತರರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತಹ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಉಭಯ ಜಗದ್ಗುರುಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ಸಾಕ್ಷರತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ, ಇಂದಿಗೂ ಕೂಡಾ ಶಿಕ್ಷಣ, ದಾಸೋಹದಲ್ಲಿ ಮುಂಚೂಣಿಯಲ್ಲಿರುವ ವೀರಶೈವ ಲಿಂಗಾಯತ ಹಾಗೂ ಇನ್ನಿತರೆ ಮಠ-ಮಂದಿರಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕೋಳಿ ಮೊಟ್ಟೆ ವಿತರಣೆ ಮಾಡುವುದರಿಂದ ಧಾರ್ಮಿಕ ನಂಬಿಕೆ, ಆಚರಣೆ ಮತ್ತು ತತ್ವಸಿದ್ಧಾಂತಗಳಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಸೆ.25ರಿಂದ ರಾಜ್ಯಾದ್ಯಂತ ಯೋಜನೆಯನ್ನು ಜಾರಿಗೊಳಿಸು ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಈ ಸೂಕ್ಷ್ಮ ವಿಷಯವನ್ನು ಇತ್ಯರ್ಥಗೊಳಿಸುವಂತೆ ಜಗದ್ಗುರುಗಳು ಸೂಚ್ಯವಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net