

ಬೆಳಗಾವಿ: ಆಂಧ್ರಪ್ರದೇಶದ ಶ್ರೀಶೈಲದ ಜಗದ್ಗುರು ಸೂರ್ಯಸಿಂಹಾಸನ ಪಂಡಿತಾರಾಧ್ಯ ಮಹಾಪೀಠದ ವತಿಯಿಂದ ಶ್ರೀಶೆಲ ಕ್ಷೇತ್ರದಲ್ಲಿ ಕರ್ನಾಟಕ ಭಕ್ತರಿಗಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಯಾತ್ರಿ ನಿವಾಸ ಹಾಗೂ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಬಹತ್ ಕಂಬಿಮಂಟಪ ಕಾಮಗಾರಿಗೆ ಬುಧವಾರ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಶಂಕುಸ್ಥಾಪನೆ ನೆರವೇರಿಸಿದರು.
ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಶೆಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಯುಗಾದಿ, ಕಾರ್ತಿಕ ದೀಪೋತ್ಸವ, ಶಿವರಾತ್ರಿ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಶ್ರೀಶೆಲ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗಾಗಿ ತಂಗಲು ವಿಭಿನ್ನ ಪ್ರಕಾರದ 374 ಕೊಠಡಿ, ಎರಡು ಡಾರ್ಮೆಟ್ರಿ ಹಾಲ್, ಎರಡು ದಾಸೋಹ ಭವನ, 500 ಕಂಬಿ ಇರಿಸುವ ಸಾಮರ್ಥ್ಯದ ಬಹತ್ ಕಂಬಿಮಂಟಪ ನಿರ್ಮಾಣಗೊಳ್ಳಲಿವೆ. ಇಲ್ಲಿ ನೂರಕ್ಕಿಂತ ಹೆಚ್ಚು ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು. ಜಮಖಂಡಿ, ನಾಗಣಸೂರು, ಅಂಬಿಕಾನಗರ, ಶಹಾಪುರ, ನೀಲಗಲ್, ಕರಿಬಂಟನಾಳ ಮುಂತಾದ ಮಠಗಳ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಉದ್ಯಮಿ ನವಲಿ ಹಿರೇಮಠ, ಬಸವರಾಜ ಬುಕ್ಕಾಣಿ, ಶಾಂತಗೌಡ ಬಿರಾದಾರ ಇತರರು ಇದ್ದರು.