ಲಿಂಗ ದೀಕ್ಷೆ ಪಡೆದ ಮೊಹಮ್ಮದ್ ಮಸ್ತಾನ್

BKT 112
Published on

ಶ್ರೀಶೈಲಂ: ಶಿವ ಸಂಸ್ಕೃತಿಗೆ ಮಾರು ಹೋಗಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರಿಂದ ಮೊಹಮ್ಮದ್ ಮಸ್ತಾನ್ ಎಂಬ ಮುಸ್ಲಿಂ ಯುವಕ ಶಿವರಾತ್ರಿ ದಿನವಾದ ಗುರುವಾರ ಲಿಂಗ ದೀಕ್ಷೆ ಪಡೆದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆದರು.

ಮೂಲತಃ ಆಂಧ್ರಪ್ರದೇಶದ ವಿಜಯವಾಡ ನಿವಾಸಿ ಮೊಹಮ್ಮದ್, ಮುಂಬೈ ಮಹಾನಗರದಲ್ಲಿ ಹರ್ಬಲ್ ಉದ್ಯಮವನ್ನು ನಡೆಸುತ್ತಿದ್ದಾರೆ. ಮೊದಲಿನಿಂದಲೂ ಶಿವ ಸಂಸ್ಕೃತಿ ಬಗ್ಗೆ ವಿಶೇಷ ಶ್ರದ್ಧೆ ಹೊಂದಿದವರಾಗಿದ್ದು, ಹಲವಾರು ಬಾರಿ ಶ್ರೀಶೈಲಕ್ಕೆ ಬಂದು ಹೋಗಿದ್ದಾರೆ. ಆದರೆ, ಈ ಹಿಂದೆ ಬಂದಾಗಲೆಲ್ಲ ಶ್ರೀಶೈಲ ಜಗದ್ಗುರುಗಳು ಧರ್ಮ ಪ್ರಚಾರದಲ್ಲಿ ನಿರತರಾಗಿದ್ದ ಕಾರಣ ಅವರಿಗೆ ಜಗದ್ಗುರುಗಳ ದರ್ಶನವಾಗಿರಲಿಲ್ಲ. ಶಿವರಾತ್ರಿಯಂದು ಜಗದ್ಗುರುಗಳು ಪೀಠದಲ್ಲಿರುತ್ತಾರೆಂದು ತಿಳಿದು ಮೊಹಮ್ಮದ್ ಶ್ರೀಶೈಲಕ್ಕೆ ಬಂದು ಜಗದ್ಗುರುಗಳ ದರ್ಶನ ಪಡೆದು ಇಷ್ಟಲಿಂಗವನ್ನು ಪಡೆಯಬೇಕೆಂಬ ತನ್ನ ಮನೋಭಿಲಾಷೆಯನ್ನು ಶ್ರೀಗಳಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ದೀಕ್ಷೆ ನಂತರ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಲು ಮೊಹಮ್ಮದರು ಮಾನಸಿಕವಾಗಿ ಸಿದ್ಧನಾಗಿರುವುದನ್ನು ಖಾತ್ರಿಪಡಿಸಿಕೊಂಡ ಜಗದ್ಗುರುಗಳು ಅವರಿಗೆ ಲಿಂಗ ದೀಕ್ಷೆಯನ್ನು ನೀಡಿದರು.

ಮೊದಲು ಪೂರ್ವಾಶ್ರಮ ನಿರಸನಗೊಳಿಸಲು ಅಗರಬತ್ತಿಯ ಮೂಲಕ ಜಿಹ್ವಾ ದಹನ, ಅಭಿಷೇಕ ಮಂತ್ರಾದಿಗಳ ಮೂಲಕ ದೇಹ ಶುದ್ಧಿ ಮೊದಲಾದ ವಿಧಿ ವಿಧಾನಗಳನ್ನು ನೆರವೇರಿಸಿ ದೇಹವನ್ನು ಶುದ್ಧಗೊಳಿಸಿ ಲಿಂಗವನ್ನು ನೀಡಿ ಮಂತ್ರೋಪದೇಶ ಮಾಡಿದರು.

ಈ ವೇಳೆ ಅವರಿಗೆ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸುವಂತೆ, ಪ್ರತಿನಿತ್ಯ ತಪ್ಪದೆ ಪೂಜೆಯನ್ನು ನೆರವೇರಿಸುವಂತೆ, ಪೂಜೆ ಮಾಡುವಾಗ ಕನಿಷ್ಠ 108 ಬಾರಿ ಪಂಚಾಕ್ಷರಿ ಮಂತ್ರವನ್ನು ಜಪಿಸುವಂತೆ ಮತ್ತು ಇನ್ನೂ ಮುಂದೆ ಎಂದೂ ಮಾಂಸಾಹಾರ, ಮದ್ಯ ಸೇವನೆ ಮುಂತಾದ ದುಶ್ಚಟಗಳನ್ನು ಮಾಡದಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.

ಲಿಂಗ ದೀಕ್ಷೆ ಪಡೆದ ನಂತರ ಮೊಹಮ್ಮದ್ ವೀರಶೈವ ಲಿಂಗಾಯತ ಧರ್ಮದ ಪಂಚಪೀಠಗಳಲ್ಲೊಂದಾದ ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಮಹಾ ಪೀಠದ ಮತ್ತು ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಭ್ರಮರಾಂಭ ದೇವಿ ದರ್ಶನ ಪಡೆದರು.

ನನಗೆ ಮೊದಲಿನಿಂದಲೂ ಶ್ರೀಶೈಲ ಮಲ್ಲಿಕಾರ್ಜುನನೆಂದರೆ ಅಪಾರ ಪೂಜ್ಯಭಾವನೆ ಇತ್ತು. ಅಲ್ಲದೆ, ವೀರಶೈವ ಸಂಪ್ರದಾಯದಂತೆ ನಾನೊಂದು ದಿನ ಲಿಂಗದೀಕ್ಷೆ ಪಡೆಯಬೇಕು ಎಂಬ ಹಂಬಲವಿತ್ತು. ಅದು ಇಂದು ಈಡೇರಿದಂತಾಗಿದೆ. ನಾನು ಸ್ವಯಂ ಪ್ರೇರಿತನಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ.
- ಮೊಹಮ್ಮದ್ ಮಸ್ತಾನ್ ಲಿಂಗ ದೀಕ್ಷೆ ಪಡೆದ ಯುವಕ, ವಿಜಯವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net