

ಮಾನ್ವಿ: ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಜನಪದ ಸಾಹಿತ್ಯ ಬದುಕಿಗೆ ಅವಶ್ಯಕವಾಗಿದ್ದು, ಉಳಿಸಿ ಬೆಳೆಸಬೇಕು ಎಂದು ರೈತ ಮುಖಂಡ ಶ್ರೀಶೈಲಗೌಡ ಪಾಟೀಲ್ ಹೇಳಿದರು.
ತಡಕಲ್ ಗ್ರಾಮದ ಭಜಂತ್ರಿ ಸಮುದಾಯ ಭವನದಲ್ಲಿ ಏಕಲವ್ಯ ದೊಡ್ಡಾಟ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದ ಕಲೆ, ಸಾಹಿತ್ಯ ಎಲ್ಲರ ಬದುಕಿನಲ್ಲಿ ಬದಲಾವಣೆ ತಂದಿದೆ. ಏಕಲವ್ಯ ದೊಡ್ಡಾಟ ಸಂಘ ನಿರಂತರವಾಗಿ ಜನಪದ ಕಲೆ ಉಳಿಸಲು ಶ್ರಮಿಸಿದೆ ಎಂದರು.
ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಡಾ.ಪ್ರಕಾಶಯ್ಯ ನಂದಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಇಂದು ನೈತಿಕತೆ ಕಳೆದುಹೋಗುತ್ತಿದೆ. ಮಕ್ಕಳ ಕೈಗೆ ಮೊಬೈಲ್ ನೀಡುತ್ತಿದ್ದೇವೆ. ಅರ್ಥವಿಲ್ಲದ ಧಾರವಾಹಿಗಳಲ್ಲಿ ಮಹಿಳೆಯರು ಕಳೆದುಹೋಗುತ್ತಿದ್ದಾರೆ. ಜನಪದ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸಿದಾಗ ನಮ್ಮ ವೈಭವದ ಸಂಸ್ಕೃತಿ ಉಳಿಸುವುದಕ್ಕೆ ಸಾಧ್ಯ ಎಂದು ಹೇಳಿದರು.
ಏಕಲವ್ಯ ಭಾವಚಿತ್ರ ಮೆರವಣಿಗೆ ನಡೆಯಿತು. ಜಾನಪದ ಕಲೆ ಹಾಗೂ ವಾದ್ಯಗಳು ಗಮನಸೆಳೆದವು. ನಂತರ ಏಕಲವ್ಯ ದೊಡ್ಡಾಟ ಸಂಘದಿಂದ ಪೌರಾಣಿಕ ದೊಡ್ಡಾಟ ಹಾಗೂ ಜನಪದ ಕಲೆಗಳನ್ನು ಪ್ರದರ್ಶಿಸಲಾಯಿತು. ಮಲ್ಲದಗುಡ್ಡದ ಅರೋಢ ಅಯ್ಯಪ್ಪ ತಾತ, ಬಿದ್ದಿನ್ನಿ ರಂಗಯ್ಯತಾತ, ಕುರುಡಿ ಶರಣಪ್ಪ ತಾತ, ತಡಕಲ್ ಅಣ್ಣಯ್ಯ ತಾತ, ಪ್ರಮುಖರಾದ ಡಾ.ಬಸವರಾಜಪ್ಪ ಪೋತ್ನಾಳ್, ಶಿವರಾಜಪ್ಪ ಧಣಿ ಇತರರಿದ್ದರು.