ಶ್ರೀರಂಗಪಟ್ಟಣ : ವಿಚಾರವಂತಿಕೆ ಇಲ್ಲದ ಬದುಕು ಅಪಾಯಕಾರಿ ಎಂದು ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಹೇಳಿದರು. ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಒಬ್ಬ ವಿದ್ಯಾರ್ಥಿಯಲ್ಲಿ ನಾಗರಿಕತೆ ಹಾಗೂ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕ ಪಾತ್ರ ಬಹು ದೊಡ್ಡದು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ವಿಮರ್ಶೆ ಮಾಡುವ ಮನೋಭಾವವನ್ನೂ ರೂಢಿಸುವಲ್ಲಿ ಶಿಕ್ಷಕರು ಗಮನ ಹರಸಬೇಕು ಎಂದು ಅವರು ಸಲಹೆ ಮಾಡಿದರು. ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಮಹತ್ವ ಮತ್ತು ಅಭಿವೃದ್ಧಿ ಶಿಕ್ಷಣದ ಗುಣಮಟ್ಟದ ಮೇಲೆ ನಿರ್ಧಾರವಾಗಲಿದ್ದು, ಶಿಕ್ಷಕರ ಕೊಡುಗೆ ಈ ನಿಟ್ಟಿನಲ್ಲಿ ಮಾನ್ಯವಾಗಿದೆ ಎಂದು ತಿಳಿಸಿದರು.ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ವಿದ್ಯಾವಂತರನ್ನು ತರಬೇತುಗೊಳಿಸುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು. ದೇಶದ ಪ್ರಗತಿಗೆ ಒಂದಿಲ್ಲೊಂದು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ವ್ಯಕ್ತಿಗಳನ್ನು ನಿರ್ಮಾಣಮಾಡುವಲ್ಲಿ ಶಿಕ್ಷಕರು ವರ್ಷ ಪೂರ್ತಿ ಶ್ರಮಿಸುತ್ತಾರೆ. ಗುರು ಸ್ಥಾನದಲ್ಲಿ ಇರುವವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ಮಾತನಾಡಿದರು.