ಭಕ್ತರಿಲ್ಲದೆ ಸೊರಗಿದ ದೇಗುಲ, ಐತಿಹಾಸಿಕ ಸ್ಥಳಗಳು

IMG_20200602_153638
Published on

ಶ್ರೀರಂಗಪಟ್ಟಣ: ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರು ಮತ್ತು ಭಕ್ತರು ಭೇಟಿ ನೀಡದ ಕಾರಣ ಶ್ರೀರಂಗಪಟ್ಟಣದ ಪ್ರಸಿದ್ಧ ದೇವಸ್ಥಾನಗಳು ಹಾಗೂ ವಿಖ್ಯಾತ ಪ್ರವಾಸಿ ತಾಣಗಳು ಆದಾಯವಿಲ್ಲದೆ ಸೊರಗಿವೆ.
ಕ್ರಿ.ಶ. 7ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ಶ್ರೀ ರಂಗನಾಥನಸ್ವಾಮಿ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸುತ್ತಿದ್ದರು. ಆದರೆ, ಲಾಕ್‌ಡೌನ್ ಅವಧಿಯಲ್ಲಿ ದೇವಾಲಯಕ್ಕೆ ಭಕ್ತರ ಭೇಟಿ ನಿಷೇಧಿಸಿದ್ದರಿಂದ ಕಾಣಿಕೆ ರೂಪದಲ್ಲಿ ಬರುತ್ತಿದ್ದ ಲಕ್ಷಾಂತರ ರೂ. ಆದಾಯ ನಷ್ಟವಾಗಿದೆ.
ಪ್ರತಿವರ್ಷ ಜನವರಿಯಿಂದ ಮೇ ವರೆಗೆ ಭಕ್ತಾದಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದೇ ಅವಧಿಯಲ್ಲಿ ಕಳೆದ ವರ್ಷ 52 ಲಕ್ಷ ರೂ. ಕಾಣಿಕೆ ಸಂದಾಯವಾಗಿತ್ತು. ಆದರೆ, ಈ ಬಾರಿ ಆದಾಯ ಶೂನ್ಯವಾಗಿದೆ.
ನಿಮಿಷಾಂಬ ದೇಗುಲ: ಗಂಜಾಂನ ಶಕ್ತಿದೇವತೆ ನಿಮಿಷಾಂಬ ದೇವಾಲಯದಲ್ಲೂ ಸತತ 75 ದಿನಗಳಿಂದ ದೇವಿಯ ದರ್ಶನವಿಲ್ಲದೆ ಭಕ್ತರು ಮನೆಗಳಲ್ಲೇ ಆರಾಧಿಸುವಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇವಾಲಯದ ಕಾಣಿಕೆ ಹುಂಡಿಗಳಲ್ಲಿ 45 ಲಕ್ಷ ರೂ. ಸಂಗ್ರಹವಾಗಿತ್ತು. ಆದರೆ, ಈ ಬಾರಿ ಯಾವುದೇ ಗಳಿಕೆ ಇಲ್ಲದಂತಾಗಿದೆ.
ಪ್ರವಾಸೋದ್ಯಮ ಕುಸಿತ: ಟಿಪ್ಪುವಿನ ಪ್ರಸಿದ್ಧ ಬೇಸಿಗೆ ಅರಮನೆ ಹಾಗೂ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಇತಿಹಾಸದಲ್ಲಿ ಮೊದಲ ಬಾರಿಗೆ ದೀರ್ಘಾವಧಿವರೆಗೆ ಬಂದ್ ಆಗಿದ್ದು, ಪ್ರವಾಸಿಗರ ಆಗಮನವಿಲ್ಲದೆ ಕೋಟ್ಯಂತರ ರೂ. ಆದಾಯ ನಷ್ಟವಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬೇಸಿಗೆ ಅರಮನೆಗೆ 48 ಲಕ್ಷ ರೂ. ಆದಾಯ ಸಂಗ್ರಹವಾಗಿದ್ದರೆ, ಪಕ್ಷಿಧಾಮ 1.25 ಕೋಟಿ ರೂ. ಆದಾಯ ಗಳಿಸಿತ್ತು. 2019ರಲ್ಲಿ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹ ಮತ್ತು 2020ರ ಮಾರ್ಚ್‌ನಲ್ಲಿ ಮೈಸೂರು ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಕ್ಷಿಧಾಮವನ್ನು ಮುಚ್ಚಲಾಗಿತ್ತು.
ಕುಟುಂಬಗಳು ಬೀದಿ ಪಾಲು: ಪಟ್ಟಣದ ಮೂಲೆ ಮೂಲೆಯಲ್ಲೂ ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ದೇವಾಲಯಗಳು ಇರುವುದರಿಂದ ಇಲ್ಲಿನ ಬಹಳಷ್ಟು ಜನರು ಪ್ರವಾಸೋದ್ಯಮವನ್ನೇ ತಮ್ಮ ಜೀವನದ ಆಧಾರವಾಗಿಸಿಕೊಂಡಿದ್ದಾರೆ.
ಆಟಿಕೆ ಸಾಮಗ್ರಿಗಳ ಮಾರಾಟ, ಹೋಟೆಲ್‌ಗಳು, ಕಾಫಿ-ಟೀ ಅಂಗಡಿ, ಕುದುರೆ ಸವಾರಿ, ಟಾಂಗಾಗಾಡಿ, ಪ್ರವಾಸಿ ಮಾರ್ಗದರ್ಶಿಗಳು, ಆಟೋ ಚಾಲಕರು, ಸಣ್ಣಪುಟ್ಟ ವ್ಯಾಪಾರಿಗಳು ಲಾಕ್‌ಡೌನ್‌ನಿಂದಾಗಿ ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ.
ದೇಶಾದ್ಯಂತ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಹಾಗೂ ಪ್ರವಾಸೋದ್ಯಮ ಆರಂಭಗೊಳ್ಳವವರೆಗೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ಈ ಪೈಕಿ ಹಲವರು ಕಟ್ಟಡ ಕಾಮಗಾರಿ, ಎಳನೀರು ಮಾರಾಟ, ವಾಚ್‌ಮನ್ ಕೆಲಸಗಳನ್ನು ಅರಸಿಕೊಂಡು ನಗರಗಳತ್ತ ತೆರಳುತ್ತಿದ್ದಾರೆ.
ಈ ನಡುವೆ, ಜೂ.8ರಿಂದ ರಾಜ್ಯವ್ಯಾಪಿ ದೇವಾಲಯಗಳಿಗೆ ಪ್ರವೇಶ ಕಲ್ಪಿಸಲು ಸರ್ಕಾರ ಆದೇಶ ನೀಡಿರುವುದು ಆಶಾಭಾವನೆ ಮೂಡಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಎದುರು ನೋಡುವಂತಾಗಿದೆ. ಇತ್ತ ದೇವಾಲಯಗಳ ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳ ಜತೆಗೆ, ಆರಂಭಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.

ಅನಾದಿ ಕಾಲದಿಂದಲೂ ಶ್ರೀ ರಂಗನಾಥಸ್ವಾಮಿಗೆ ಪೂಜೆ ಎಂದಿಗೂ ನಿಂತಿಲ್ಲ. ಬಂದ್ ಹಾಗೂ ಗ್ರಹಣದಂತಹ ಸಮಯದಲ್ಲಿ ಮಾತ್ರ ದೇವಾಲಯಗಳ ಬಾಗಿಲು ಮುಚ್ಚಿ ದೇವರ ದರ್ಶನಕ್ಕೆ ಕೆಲಕಾಲ ನಿರ್ಬಂಧ ಹೇರಿದ್ದನ್ನು ಕಂಡಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ಕರೊನಾ ಲಾಕ್‌ಡೌನ್‌ನಿಂದಾಗಿ ಸುದೀರ್ಘ ಕಾಲ ದೇವಾಲಯಕ್ಕೆ ಭಕ್ತರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಆದಾಯ ಗಳಿಕೆ ಇಲ್ಲವಾಗಿದೆ.
ಆನಂದ್, ಅಧ್ಯಕ್ಷರು, ಶ್ರೀ ರಂಗನಾಥಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಶ್ರೀರಂಗಪಟ್ಟಣ

ದೇವಾಲಯಗಳಿಗೆ ಬರುವ ಭಕ್ತರು ಹಾಗೂ ಐತಿಹಾಸಿಕ ಸ್ಥಳ ಮತ್ತು ಸ್ಮಾರಕಗಳಿಗೆ ಭೇಟಿ ನೀಡುವ ಪ್ರವಾಸಿಗರೇ ನಮ್ಮ ಅನ್ನದಾತರು. ಪ್ರವಾಸೋದ್ಯಮವನ್ನು ನೆಚ್ಚಿಕೊಂಡೇ ಹಲವು ಕುಟುಂಬಗಳು ಬದುಕುತ್ತಿವೆ. ಕುದುರೆ ಸವಾರಿ ವೃತ್ತಿಯೂ ಆ ಸಾಲಿಗೆ ಸೇರಿದೆ. ವರ್ಷದಲ್ಲಿ 6 ತಿಂಗಳು ಮಾತ್ರ ಸಂಪಾದಿಸಿಕೊಳ್ಳುವ ನಾವು ಉಳಿದ 6 ತಿಂಗಳು ಹಣ ಉಳಿಸಿಕೊಂಡು ಬದುಕು ನಡೆಸುತ್ತೇವೆ. ಆದರೆ, 2019ರಿಂದ ಪ್ರವಾಹ, ಹಕ್ಕಿಜ್ವರ ಹಾಗೂ ಇದೀಗ ಎದುರಾದ ಲಾಕ್‌ಡೌನ್‌ನಿಂದ ತತ್ತರಿಸಿಹೋಗಿದ್ದೇವೆ. ನಮ್ಮನ್ನೇ ನಂಬಿರುವ ಮೂಕ ಪ್ರಾಣಿಗಳಿಗೂ ಆಹಾರ ಒದಗಿಸಲು ಪರಿತಪಿಸುತ್ತಿದ್ದೇವೆ.
ಅಬ್ಜಲ್ ಪಾಷ, ಕುದುರೆ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net