

ಶ್ರೀರಂಗಪಟ್ಟಣ: ತಾಲೂಕಿನ ಕೆ.ಶೆಟ್ಟಹಳ್ಳಿ ವ್ಯಾಪ್ತಿಯ ವಿವಿಧೆಡೆ ಶಿಕ್ಷಣ ಸಂಸ್ಥೆಗಳ ಸಮೀಪ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಸುತ್ತಿದ್ದವರ ವಿರುದ್ಧ ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸ್ ಸಹಭಾಗಿತ್ವದಲ್ಲಿ ಜಿಲ್ಲಾ ಸಲಹೆಗಾರ ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹಾಗೂ ಕೆ.ಶೆಟ್ಟಹಳ್ಳಿ ಗ್ರಾಪಂ ಪಿಡಿಒ ಶಿಲ್ಪಾ ಅವರು ಕಾರ್ಯಾಚರಣೆ ನಡೆಸಿ ಸೆಕ್ಷನ್ 4ರ ಅಡಿಯಲ್ಲಿ 7 ಪ್ರಕರಣ ದಾಖಲಿಸಿ 1200 ರೂ. ದಂಡ ಹಾಗೂ ಸೆಕ್ಷನ್ 6ಬಿ ಅಡಿಯಲ್ಲಿ 11 ಪ್ರಕರಣ ದಾಖಲಿಸಿ 1040 ರೂ. ದಂಡ ಸೇರಿದಂತೆ ಒಟ್ಟಾರೆ 18 ಪ್ರಕರಣ ದಾಖಲಿಸಿ 2240 ರೂ. ದಂಡ ವಿಧಿಸಿದರು.
ಜಿಲ್ಲಾ ಸಲಹೆಗಾರ ತಿಮ್ಮರಾಜು ಮಾತನಾಡಿ, ಜಿಲ್ಲಾಧಿಕಾರಿ ನಿರ್ದೇಶನದಂತೆ ಜಿಲ್ಲೆಯಾದ್ಯಂತ ತಂಬಾಕು ಮುಕ್ತ ಯುವಜನತೆಯನ್ನು ಕಾಣುವ ಹಾಗೂ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾರ್ಯಾಚರಣೆ ಹಮ್ಮಿಕೊಂಡಿದೆ ಎಂದರು.
ಇದೇ ವೇಳೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ಕೋಟ್ಪಾ ಬಗ್ಗೆ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ಮಾನವನ ದೇಹದ ಮೇಲೆ ಉಂಟಾಗುತ್ತಿರುವ ವಿವಿಧ ಕಾಯಿಲೆಗಳ ಕುರಿತು ಅರಿವು ಮೂಡಿಸಲಾಯಿತು. ಜಿಲ್ಲೆ ಮತ್ತು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ತಂಬಾಕು ವ್ಯಸನಮುಕ್ತ ಕೇಂದ್ರದ ಉಚಿತ ಸೇವಾ ಸೌಲಭ್ಯ ಬಳಸಿಕೊಳ್ಳುವ ಬಗ್ಗೆ ತಿಳಿಸಿಕೊಡಲಾಯಿತು. ಕೋಟ್ಪಾ ಕಾರ್ಯಾಚರಣೆಯಲ್ಲಿ ಆರಕ್ಷಕ ಲಕ್ಷ್ಮಣ್, ಗ್ರಾಪಂನ ಸಿಬ್ಬಂದಿ ಮತ್ತು ಸದಸ್ಯರು ಇದ್ದರು.