ಮಳಿಗೆಗಳ ಬಹಿರಂಗ ಹರಾಜಿನಲ್ಲಿ ಅಧಿಕಾರಿಗಳು, ವರ್ತಕರ ವಾಗ್ವಾದ

SRP_10-02jpg
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆ ನೀಡಲು ಕರೆಯಲಾಗಿದ್ದ ಬಹಿರಂಗ ಹರಾಜು ಪ್ರಕ್ರಿಯೆ ವೇಳೆ ಅಧಿಕಾರಿಗಳೊಂದಿಗೆ ಕೆಲವು ವರ್ತಕರು ವಾಗ್ವಾದ ನಡೆಸಿದರು.

ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ 20 ವಾಣಿಜ್ಯ ಮಳಿಗೆಗಳಿವೆ. ಅವುಗಳನ್ನು ತಿಂಗಳು ಬಾಡಿಗೆಗೆ ನೀಡಲು ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ಹರಾಜು ಕರೆಯಲಾಗಿತ್ತು. ಈ ಹರಾಜಿನಲ್ಲಿ ಪಟ್ಟಣ ಬಸ್ ನಿಲ್ದಾಣ ಮುಂಭಾಗವಿರುವ 4 ವಾಣಿಜ್ಯ ಮಳಿಗೆಗಳನ್ನು ಪಡೆಯಲು ನಾಲ್ವರು ಬಿಡ್‌ದಾರರು ಮಾತ್ರ ಪಾಲ್ಗೊಂಡಿದ್ದರು. ಹಾಗಾಗಿ, ವರ್ತಕ ಕುಮಾರ್ ಮತ್ತು ರೇಣುಕುಮಾರ್ ಎಂಬುವವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕೇವಲ ನಾಲ್ವರು ಹೊರತುಪಡಿಸಿ ಉಳಿದವರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗದಿರಲು ಅಧಿಕಾರಿಗಳ ಹುನ್ನಾರವೇ ಕಾರಣ. ಆದ್ದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಗೆ ಸೇರಿದ ಖಾಸಗಿ ಬಸ್ ನಿಲ್ದಾಣದಲ್ಲಿರುವ 4 ಮಳಿಗೆಗಳು, ಗಂಜಾಂನ ಕಾವೇರಿ ಸಂಗಮದಲ್ಲಿ 15 ಮಳಿಗೆ, ಮಾರುಕಟ್ಟೆ ಬೀದಿಯಲ್ಲಿ ಒಂದು ಮಳಿಗೆಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು. ಈ ಸಂಬಂಧ ಅಕ್ಟೋಬರ್ 26ರಿಂದ ನವೆಂಬರ್ 8ರವರೆಗೂ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಹಾಗೂ ಕರಪತ್ರಗಳ ಮೂಲಕ ಪ್ರಚಾರ ಮಾಡಲಾಗಿತ್ತು. ದಿನಪತ್ರಿಕೆಗಳಲ್ಲೂ ಜಾಹೀರಾತು ಪ್ರಕಟವಾಗಿತ್ತು. ಅದರಂತೆ ನಾಲ್ವರು ಬಿಡ್‌ದಾರರು ನಿಯಮದ ಪ್ರಕಾರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪುರಸಭೆ ವ್ಯವಸ್ಥಾಪಕ ಸೋಮಶೇಖರ್, ಕಂದಾಯ ಅಧಿಕಾರಿ ಗಿರೀಶ್ ತಿಳಿಸಿದರು.
ಇದರ ನಡುವೆಯೇ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮೂರು ಮಳಿಗೆಗಳನ್ನು ಬಿಡ್‌ದಾರರು ಪಡೆದುಕೊಂಡಿದ್ದಾರೆ. ಹೆಚ್ಚಿನ ಬಿಡ್‌ದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗದ ಕಾರಣ ಉಳಿದ 18 ಮಳಿಗೆಗಳು ಹರಾಜುಗೊಂಡಿಲ್ಲ.

ಪುರಸಭೆ ಸದಸ್ಯ ದಯಾನಂದ್, ರಾಜಸ್ವ ನೀರಿಕ್ಷಕ ರಾಜಣ್ಣ, ಸಿಬ್ಬಂದಿಗಳಾದ ಶಶಿಕುಮಾರ್, ಶರತ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net