

ಮೈಸೂರು: ಶ್ರೀರಂಗಪಟ್ಟಣ-ಕುಶಾಲನಗರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಫೆಬ್ರವರಿಯಲ್ಲಿ ಚಾಲನೆ ನೀಡಲಾಗು ವುದು ಎಂದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಹೆದ್ದಾರಿ ನಿರ್ಮಾಣಕ್ಕೆ ಹಮ್ಮಿಕೊಂಡಿದ್ದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗ ಳೊಂದಿಗೆ ಮಾತನಾಡಿ, ನೂತನವಾಗಿ ನಿರ್ಮಿಸುವ ಈ ರಾಷ್ಟ್ರೀಯ ಹೆದ್ದಾರಿಯು ಶ್ರೀರಂಗಪಟ್ಟಣದ ಬಿ.ಅಗ್ರಹಾರದಿಂದ ಪ್ರಾರಂಭಗೊಂಡು ಕೊಡಗು ಜಿಲ್ಲೆಯ ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿ ಈಗಿರುವ ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬಳಿ ಸೇರಲಿದೆ ಎಂದರು.
ಒಟ್ಟು 93 ಕಿ.ಮೀ. ರಸ್ತೆ ಇದಾಗಿದ್ದು, ಒಟ್ಟು 4 ಪ್ಯಾಕೇಜ್‌ನಲ್ಲಿ ಕಾಮಗಾರಿ ನಡೆಯಲಿದೆ. ಶ್ರೀರಂಗಪಟ್ಟಣದ ಬಿ.ಅಗ್ರಹಾರದಿಂದ ಮೈಸೂರಿನ ಗುಂಗ್ರಾಲ್‌ಛತ್ರದವರೆಗಿನ ಪ್ಯಾಕೇಜ್‌ನಲ್ಲಿ ಶೇ.98ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಿರುಜಾಜಿಯಿಂದ ರಟ್ನಳ್ಳಿವರೆಗಿನ ಪ್ಯಾಕೇಜ್‌ನಲ್ಲಿ ಶೇ.78 ರಷ್ಟು, ಅವರೆಮಲ್ಲರಾಜಪಟ್ಟಣದಿಂದ ಬೆಳತ್ತೂರು ಪ್ಯಾಕೇಜ್‌ನಲ್ಲಿ ಶೇ.54 ರಷ್ಟು, ಬಸವನಹಳ್ಳಿಯಿಂದ ಹೆಮ್ಮಿಗೆ ಪ್ಯಾಕೇಜ್‌ನಲ್ಲಿ ಶೇ.87 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಚತುಷ್ಪಥ ರಸ್ತೆಗೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಆದರೆ, ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿ ಹಲವಾರು ಪ್ರಮುಖ ನಗರ, ಪಟ್ಟಣಗಳು, ಪ್ರವಾಸಿ ತಾಣಗಳು ಇದ್ದು, ಅವುಗಳಿಗೆ ಸಂಪರ್ಕ ನೀಡುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ನಗರ, ಪಟ್ಟಣ, ಪ್ರವಾಸಿ ತಾಣಗಳಿಗೆ ಸಂಪರ್ಕ ನೀಡಲು ಸರ್ವೀಸ್ ರಸ್ತೆ ನಿರ್ಮಾಣ ಮಾಡಲು ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕೆ 84 ಹೆಕ್ಟೇರ್ ಭೂಮಿಯ ಅವಶ್ಯಕತೆ ಇದೆ. ಈ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮರಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಅನುಮತಿ ಪಡೆಯುವುದು ಮಾತ್ರ ಬಾಕಿ ಇದೆ. ಈ ಪ್ರಕ್ರಿಯೆ ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದ್ದು, ಅದಾದ ನಂತರ ಮಾಸಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ಪಿರಿಯಾಪಟ್ಟಣ, ಬೈಲುಕುಪ್ಪೆ, ಕಟ್ಟೆಮಳಲವಾಡಿ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ನೀಡಲು ಸರ್ವೀಸ್ ರಸ್ತೆಗಳನ್ನು ನೀಡಲಾಗುವುದು. ಶ್ರೀರಂಗಪಟ್ಟಣದಿಂದ ಕುಶಾಲನಗರ ಬಳಿಯ ಬಸವನಹಳ್ಳಿವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಕೊಡಗು ಜಿಲ್ಲೆಯಲ್ಲಿ ಭೂ ಕುಸಿತದಂತಹ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಕೊಡಗಿನ ಸಂಪಾಜೆವರೆಗೆ ಹಾಲಿ ಇರುವ ರಸ್ತೆಯಲ್ಲಿ ಶೋಲ್ಡರ್ ವೈಡ್ನಿಂಗ್ ಮಾತ್ರ ಮಾಡಲಾಗುವುದು. ಸಂಪಾಜೆಯಿಂದ ಮುಂದೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಎಂದರು.
ಮಡಿಕೇರಿಯಲ್ಲಿ ಫ್ಲೈಓವರ್: ನೂತನ ರಾಷ್ಟ್ರೀಯ ಹೆದ್ದಾರಿಯು ಮಡಿಕೇರಿ ನಗರದ ಮೂಲಕ ಹಾದು ಹೋಗುವುದನ್ನು ತಪ್ಪಿಸಲು ಮಡಿಕೇರಿಯ ಅರಣ್ಯ ಭವನದಿಂದ ಭಾಗಮಂಡಲ ಡಿವಿಯೇಷನ್‌ವರೆಗೆ ಫ್ಲೈಓವರ್ ನಿರ್ಮಾಣ ಮಾಡಲಾಗುವುದು. ಮಡಿಕೇರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋದರೆ ಕಿಷ್ಕಿಂಧೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರು-ನಂಜಗೂಡು ರಾಷ್ಟ್ರೀಯ ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲು ಉದ್ದೇಶಿ ಸಲಾಗಿದೆ. ಈ ಕಾಮಗಾರಿಯು ಲೋಕಸಭಾ ಚುನಾವಣೆ ನಂತರ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಮೈಸೂರು-ಎಚ್.ಡಿ. ಕೋಟೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಎಚ್.ಡಿ.ಕೋಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ವಿಸ್ತೀರ್ಣ ಅನಿವಾರ್ಯವಾಗಿದೆ ಎಂದರು.
ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಕಿರಣ್, ಶಿವೇಗೌಡ ಹಾಗೂ ಇತರರು ಇದ್ದರು.